ಹೊಸದಿಗಂತ ವರದಿ ಪುತ್ತೂರು:
ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರಿನ ಆದೇಶ ಮಾಡಿರುವ ಸರಕಾರದ ತೀರ್ಮಾನ ಖಂಡನೀಯ ಎಂದು ಭಜರಂಗ ದಳದ ದಕ್ಷಿಣ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಮತ್ತು ಸರಕಾರದ ವಿರುದ್ಧ ಹರಿ ಹಾಯ್ದಿರುವ ಅವರು, ಅಪ್ರಾಪ್ತ ಬಾಲಕಿಯನ್ನು ಅನ್ಯಮತೀಯನಿಂದ ರಕ್ಷಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಯುವಕರ ಮೇಲೆ ಗಡಿಪಾರಿನ ಆದೇಶ ಹೊರಡಿಸಲಾಗಿದೆ. ಬಾಲಕಿಯನ್ನು ರಕ್ಷಿಸಿ ಅವರ ಪೋಷಕರ ಕೈಗೆ ಒಪ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಆರೋಪಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದರು.
ಆ ಪ್ರಕರಣದಲ್ಲಿದ್ದ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ ಗಡಿಪಾರು ಮಾಡುವ ಕಾರಣ ಕೇಳಿ ನೋಟೀಸ್ ಹೊರಡಿಸಲಾಗಿದೆ. ಗಡಿಪಾರಿನ ನೋಟೀಸ್ ಜಾರಿ ಮಾಡಿರುವ ನಾಲ್ಕು ಯುವಕರು ಕೂಲಿ ಕೆಲಸ, ಆಟೋ ಚಾಲಕರಾಗಿ ದುಡಿಯುವವರು ಪೋಲೀಸ್ ಇಲಾಖೆ ಹೊರಡಿಸಿದ ನೋಟೀಸ್ ನಲ್ಲಿ ಯುವಕರನ್ನು ಕೋಮುವಾದಿಗಳು, ರೌಡಿಶೀಟರ್ ಗಳು ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಈ ರೀತಿ ಹಿಂದೂ ಸಂಘಟನೆಯನ್ನು ಮಟ್ಟ ಹಾಕಲು ಸರಕಾರ ಚಿಂತಿಸಿದೆ. ಸರಕಾರದ ಈ ಚಿಂತನೆ ಯಾವತ್ತೂ ಈಡೇರಲ್ಲ. ಗೃಹ ಸಚಿವರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತೇವೆ. ಪೋಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂ ಸಂಘಟನೆಯನ್ನು ಮಟ್ಟ ಹಾಕುತ್ತೀರಿ ಎಂದು ಭಾವಿಸಿದರೆ ಅದು ತಪ್ಪಾಗುತ್ತೆ ಎಂದು ಮುರಳೀಕೃಷ್ಣ ಹಸಂತಡ್ಕ ಸ್ಪಷ್ಟಪಡಿಸಿದರು.
ಹಿಂದೂ ಸಮಾಜ ಜಾಗೃತಗೊಂಡಿದೆ. ಇದಕ್ಕೆ ತಕ್ಕ ಉತ್ತರ ನೀಡುವಷ್ಟು ಶಕ್ತವಾಗಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.