ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಕಂಪ್ಯೂಟರ್ ಯುಗದಲ್ಲೂ ಭೂತ ಬೇಟೆಯ ಹೆಸರಲ್ಲಿ ಕೆಲ ಕಳ್ಳ ಮಾಂತ್ರಿಕರು ದೌರ್ಜನ್ಯ ಎಸಗುತ್ತಿದ್ದಾರೆ. ವಿಕಾರಾಬಾದ್ ಜಿಲ್ಲೆಯ ಪರಿಗಿ ವಲಯದ ನಸ್ಕಲ್ ಉಪನಗರದಲ್ಲಿ ಕಳ್ಳ ಬಾಬಾನ ಪ್ರಕರಣ ಬೆಳಕಿಗೆ ಬಂದಿದೆ. ದೆವ್ವ ಬಿಡಿಸುವ ನೆಪದಲ್ಲಿ 17 ವರ್ಷದ ಬಾಲಕಿಯೊಬ್ಬಳ ಕಾಲು, ಕೈಗಳು ಬೆಂಕಿಯಿಂದ ಸುಟ್ಟುಹೋಗಿವೆ. ಕೂಡಲೇ ಬಾಲಕಿಯನ್ನು ವಿಕಾರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ನೀಡಿದ ಮಾಡಿದ ವೈದ್ಯರು 24 ಗಂಟೆ ಆಗುವವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಅವಶ್ಯಕತೆಯಿದ್ದರೆ ಎರಡೂ ಕಾಲುಗಳನ್ನು ತೆಗೆಯಬೇಕು ಎಂದ ವೈದ್ಯರ ಸಲಹೆ ಕೇಳಿ ಪೋಷಕರು ಕಂಗಾಲಾಗಿದ್ದಾರೆ.
ವಿಕಾರಾಬಾದ್ ಜಿಲ್ಲೆಯ ಧಾರೂರು ವಲಯದ ಕುಕ್ಕಿಂದಾ ಗ್ರಾಮದ ಮಂಜುಳಾ ವೆಂಕಟಯ್ಯ ಅವರ 17 ವರ್ಷದ ಮಗಳು ಅಶ್ವಿನಿ ವಿಕಾರಾಬಾದ್‌ನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದ ಅಶ್ವಿನಿಗೆ ಹತ್ತಿರದ ಸಂಬಂಧಿಯ ಸೂಚನೆಯಂತೆ ಭೂತ ವಿಸರ್ಜನೆ ಮಾಡುತ್ತೇನೆಂದು ನಂಬಿಸಿರುವ ಕಳ್ಳ ಬಾಬಾನ ಬಳಿಗೆ ಬಾಲಕಿಯನ್ನು ಕರೆದೊಯ್ದಿದ್ದಾರೆ. ಬಾಲಕಿಗೆ ದೆವ್ವ ಹಿಡಿದಿದೆ ಎಂದು ಚಿತ್ರಹಿಂಸೆ ನೀಡಿದ್ದಾನೆ.
ಬೆಂಕಿ ಕೆಂಡದ ಮೇಲೆ ನಡೆಸಿದ್ದಲ್ಲದೆ. ಬೆಂಕಿಯಲ್ಲಿ ಕಾಲುಗಳನ್ನು ಇರಿಸುವಂತೆ ಸೂಚಿಸಿದ್ದಾನೆ. ಇದರಿಂದ ಬಾಲಕಿ ಕಾಲು ಸಂಪೂರ್ಣ ಬೆಂದು ಹೋಗಿವೆ. ಘಟನೆ ನೋಡಿ ಕಂಗಾಲಾದ ಪೋಷಕರು ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಕಾಲು ಸಂಪೂರ್ಣ ಸುಟ್ಟುಹೋಗಿವೆ. ಶಸ್ತ್ರಚಿಕಿತ್ಸೆ ಮಾಡಿ ಕಾಲುಗಳನ್ನು ತೆಗೆಯಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಭೂತ ವೈದ್ಯ ಎನಿಸಿಕೊಂಡಿದ್ದ ಕಳ್ಳ ಮಾಂತ್ರಿಕನ ಕೈಗೆ ಪೊಲೀಸರು ಬೇಡಿ ಹಾಕಿ ವಿಚಾರಣೆ ನಡೆಸುತ್ತಿದ್ದಾರೆ.