ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ಇಲ್ಲ: ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ಸಾಧ್ಯತೆ ಕಡಿಮೆ ಇದ್ದು, ಸದ್ಯ ಕೇಂದ್ರದ ಯಾವುದೇ ಸಚಿವರನ್ನೂ ಭೇಟಿಯಾಗಿಲ್ಲ ಎಂದು ಸಿಎಂ ತಿಳಿಸಿದರು.
ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ದೆಹಲಿ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ದೆಹಲಿಗೆ ಬಂದಿದ್ದೇನೆ, ಈ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತ ಮಾತುಕತೆ ಸಾಧ್ಯತೆ ಕಡಿಮೆ ಇದೆ. ಸದ್ಯ ಕೇಂದ್ರದ ಯಾವುದೇ ಸಚಿವರನ್ನೂ ಭೇಟಿಯಾಗಿಲ್ಲ. ಈ ಪ್ರವಾಸದ ವೇಳೆ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದಿಲ್ಲ ಎಂದು ತಿಳಿಸಿದರು.

ಕತ್ತಿ ಹೇಳಿಕೆ ಇದೇ ಮೊದಲಲ್ಲ, ರಾಜ್ಯ ವಿಭಜನೆ ಪ್ರಸ್ತಾವವಿಲ್ಲ

2024ರ ನಂತರ ದೇಶದಲ್ಲಿ 50 ಹೊಸ ರಾಜ್ಯಗಳು ರಚನೆಯಾಗಲಿದ್ದು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ಆದರೆ ಈ ರೀತಿ ಅವರು ಹೇಳುತ್ತಿರುವುದು ಇದೇ ಮೊದಲೇನಲ್ಲ. ಹತ್ತು ಹಲವಾರು ವರ್ಷದಿಂದ ಈ ರೀತಿ ಹೇಳುತ್ತಿದ್ದಾರೆ. ಹಾಗಾಗಿ ಅವರ ಪ್ರತ್ಯೇಕ ರಾಜ್ಯ ಹೇಳಿಕೆಗೆ ಅವರೇ ಉತ್ತರ ಕೊಡಬೇಕು. ಸರ್ಕಾರದ ಮಟ್ಟದಲ್ಲಿ ಆ ರೀತಿಯ ಯಾವುದೇ ಚಿಂತನೆ ಇಲ್ಲ. ವಿಚಾರವೂ ಇಲ್ಲ, ಪ್ರಸ್ತಾವವೂ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!