ಮಂಗಳೂರಿನ ಕಡಲಲ್ಲಿ ಮುಳುಗಿಯೇ ಬಿಟ್ಟಿತು `ಎಂ.ವಿ.ಪ್ರಿನ್ಸಸ್ ಮಿರಾಲ್’…

ಹೊಸದಿಗಂತ ವರದಿ, ಮಂಗಳೂರು:

ಉಳ್ಳಾಲ ಕಡಲ ತೀರದಿಂದ 1.5 ನಾಟಿಕಲ್ ಮೈಲ್ ದೂರದ ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಎಂ.ವಿ.ಪ್ರಿನ್ಸಸ್ ಮಿರಾಲ್ ಕಾರ್ಗೋ ಹಡಗು ಮುಳುಗಡೆಯಾಗಿದೆ.
ಬೃಹತ್ ಹಡಗು ಮುಳುಗಡೆಯಿಂದ ತೈಲ ಸೋರಿಕೆಯ ಆತಂಕವೂ ಎದುರಾಗಿದೆ. ಸುಮಾರು ೮ ಸಾವಿರ ಟನ್ ಸ್ಟೀಲ್ ಕಾಯಿಲ್‌ಗಳನ್ನು ಚೀನಾದಿಂದ ಲೆಬನಾನ್‌ಗೆ ಸಾಗಿಸುತ್ತಿದ್ದ ಈ ನೌಕೆ ಮಂಗಳವಾರ ಸಮುದ್ರ ಮಧ್ಯೆ ಅಪಾಯಕ್ಕೆ ಸಿಲುಕಿತ್ತು. ನೌಕೆಯ ತಳಭಾಗದಲ್ಲಿ ರಂಧ್ರ ಉಂಟಾಗಿ ನೀರು ಒಳಪ್ರವೇಶಿಸುತ್ತಿತ್ತು.
ಮುಳುಗಡೆ ಭೀತಿಯಿಂದ ನೌಕೆಯ ಕ್ಯಾಪ್ಟನ್ ಕೋಸ್ಟ್ ಗಾರ್ಡ್‌ಗೆ ಸಂದೇಶ ರವಾನಿಸಿ ನೆರವು ಕೋರಿದ್ದರು. ಈ ನೌಕೆ ತೀರ ಹಳೆಯದಾದ ಕಾರಣ ನವಮಂಗಳೂರು ಬಂದರು ಪ್ರವೇಶಕ್ಕೆ ಅನುಮತಿ ಸಿಕ್ಕಿರಲಿಲ್ಲ. ಇದರಿಂದಾಗಿ ನೌಕೆ ಇದ್ದಲ್ಲಿಗೆ ತೆರಳಿ ಕೋಸ್ಟ್‌ಗಾರ್ಡ್ ಸಿಬ್ಬಂದಿ ೧೫ ಮಂದಿಯನ್ನು ರಕ್ಷಿಸಿದ್ದರು. ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಈ ನಡುವೆ ಹಡಗು ಕೂಡ ಮುಳುಗಡೆಯಾಗಿದೆ.

ಅಧಿಕಾರಿಗಳೊಂದಿಗೆ ಸಭೆ

ಹಡಗು ಮುಳುಗಡೆಯಾಗಿರುವುದರಿಂದ ಮುಂದೆ ಆಯಿಲ್ ಸೋರಿಕೆಯಾಗಿ ಅಪಾಯ ಎದುರಾಗುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಡಳಿತ ಕೋಸ್ಟ್‌ಗಾರ್ಡ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಮುಳುಗಡೆಯಾದ ಎಂ.ವಿ.ಪ್ರಿನ್ಸಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ಆಗದಂತೆ ತಡೆಗಟ್ಟಲು ಹಾಗೂ ಹಡಗಿನಲ್ಲಿರುವ ಫರ್ನಸ್ ಆಯಿಲ್ ಮತ್ತು ಇಂಜಿನ್ ಆಯಿಲ್‌ನ್ನು ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿ ಅವರಿಗೆ ಜಿಲ್ಲಾಡಳಿತ ಸೂಚಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೂಡ ಸೂಚನೆ ನೀಡಲಾಗಿದ್ದು, ಸಮುದ್ರದ ನೀರಿನ ಗುಣಮಾಪನವನ್ನು ಮಾಡಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ. ಒಂದು ವೇಳೆ ತೈಲ ಸೋರಿಕೆ ಆದಲ್ಲಿ ಅದು ನದಿಗೆ ಸೇರದಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಸ್ಪಷ್ಟ ನೂಚನೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕೋಸ್ಟ್ ಗಾರ್ಡ್ ಡಿಐಜಿ ಅವರನ್ನು ಚೀಫ್ ಇನ್ಸಿಡೆಂಡ್ ಕಮಾಂಡರ್ ಆಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!