ಹೊಸ ಶಿಕ್ಷಣ ನೀತಿ ರೂಪಿಸುವಲ್ಲಿ ತಜ್ಞರು ಪ್ರಮುಖ ಪಾತ್ರವಹಿಸಿದ್ದಾರೆ: ಅರುಣ ಶಹಾಪೂರ

ಹೊಸದಿಗಂತ ವರದಿ ಧಾರವಾಡ:

ಹೊಸ ಶಿಕ್ಷಣ ನೀತಿ ರೂಪಿಸಿದ್ದು ಶಿಕ್ಷಣ ತಜ್ಞರೇ ಹೊರತು ಮೋದಿ ನೇತೃತ್ವದ ಸರ್ಕಾರವಲ್ಲ. ನಮ್ಮಲ್ಲಿ ಪ್ರತಿರೋಧಿಸುವ ಅಭ್ಯಾಸ ಕಡಿ‌ಮೆ ಆಗಿದೆ. ಶಿಕ್ಷಕರ ಸಂಘಟನೆ, ತಜ್ಞರೆಲ್ಲ ಸೇರಿ ಸರ್ಕಾರದ ತಪ್ಪು ನಡೆಯ ಬಗ್ಗೆ ಎಚ್ಚರಿಸುವುದು ಪ್ರಸ್ತುತ ಅನಿವಾರ್ಯ ಎಂದು ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪೂರ ಹೇಳಿದರು.

ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಭವನದಲ್ಲಿ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜ್ಯುಕೇಶನ್ ವತಿಯಿಂದ ರಾಷ್ಟ್ರೀಯ ‌ಶಿಕ್ಷಣ ನೀತಿ – 2020 ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿನ್ನೆ ಆಯೋಜಿಸಲಾಗಿದ್ದ ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕ ಎಸ್.ವಿ.‌ ಸಂಕನೂರ‌ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಹೊಸ ಶಿಕ್ಷಣ ನೀತಿ ಅಧ್ಯಯಿಸದೇ ರಾಜ್ಯದಲ್ಲಿ ಮತ್ತೊಂದು ಶಿಕ್ಷಣ ನೀತಿ ತರಲು ಹೊರಟಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನವರು ಭಾಗಿಯಾಗಿದ್ದಾರೆ ಎನ್ನುವುದನ್ನು ಅವರು ಮರೆತಿದ್ದಾರೆ.‌ ಇದು ಸಂಪೂರ್ಣ ಜನಾಭಿಪ್ರಾಯ ಆಧಾರಿಸಿ ರೂಪಿತವಾಗಿದೆ.

1968, 1986ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಶಿಕ್ಷಣ ನೀತಿ ರೂಪಿಸಲಾಗಿತ್ತು ಆದರೆ ಆಗ ಇಲ್ಲದ ವಿರೋಧ ಈಗ ಏಕೆ? ಹಳೆ ಶಿಕ್ಷಣ ನೀತಿಯಲ್ಲಿ ಕೌಶಲ್ಯ ಕಲಿಕೆಯ ಅಭಾವದಿಂದಲೇ ನಿರುದ್ಯೋಗ ಸಮಸ್ಯೆ ಎದುರಾಯಿತು.‌ 2020ರ ಶಿಕ್ಷಣ ನೀತಿ ಮೊದಲಿದ್ದ ಲೋಪಗಳನ್ನು ಸರಿಪಡಿಸಿಕೊಂಡು ವೈಜ್ಞಾನಿಕವಾಗಿ ಮಾಡಲಾಗಿದೆ.‌ ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯ ಅಧ್ಯಯಿಸಲು ಸಂಪೂರ್ಣ ಸ್ವಾತಂತ್ರ್ಯವಿದೆ.

ರಾಜ್ಯ ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಹೊಸ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತದೆ. ಹೊಸತನ ಇದ್ದಾಗ ಒಂದಿಲ್ಲ ಒಂದು ಕೊರತೆ ಇರುತ್ತದೆ, ಅದನ್ನು ಮುಕ್ತವಾಗಿ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕೆ ಹೊರತು ಅದನ್ನು ವಿರೋಧಿಸಬಾರದು ಎಂದು ಹೇಳಿದರು.

ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪೂರ ಮಾತನಾಡಿ, ನಿರುದ್ಯೋಗ ಸಮಸ್ಯೆ ಒಂದೆಯೆಡೆಯಾದರೆ ವಿದ್ಯಾರ್ಥಿಗಳಲ್ಲಿ ಮೌಲ್ಯಗಳ ಕೊರತೆ, ಆತ್ಮವಿಶ್ವಾಸದ ಗೌಣತೆ ವಿಶ್ವವಿದ್ಯಾಲಯಗಳಲ್ಲಿ ಜಾತೀಯತೆ ಮುಂತಾದ ಸಮಸ್ಯೆ ಹಳೆ ಶಿಕ್ಷಣ ನೀತಿಯ ಫಲವಾಗಿದೆ. ನಲಿ-ಕಲಿ ಯೋಜನೆ ಪರಿಣಾಮಕಾರಿ ಅನುಷ್ಠಾನವಾಗಬೇಕು. ಶಾಲೆಗಳಲ್ಲಿ ಅಧ್ಯಯನದ ವಾತಾವರಣ ಅಲಭ್ಯತೆಯಿಂದ ಎಷ್ಟೋ ಮಕ್ಕಳು ಶಾಲೆಯಿಂದ ವಿಮುಖರಾದರು. ಶಾಲೆಯ ಶಿಕ್ಷಣಕ್ಕೂ ಔದ್ಯೋಗಿಕ ಕ್ಷೇತ್ರದ ಸ್ಪರ್ಧಾತ್ಮಕತೆಗೂ ಅಜಗಜಾಂತರವಿದೆ. ಅದಕ್ಕಾಗಿ ‘ಸ್ಕಿಲ್ ಇಂಡಿಯಾ’ ಜಾರಿಗೊಂಡಿತು.

ಶಿಕ್ಷಣ ಕ್ಷೇತ್ರದಲ್ಲಿ ಮೂಲ ಸೌಕರ್ಯ ಇಲ್ಲದಾಗ, ಈಗಿರುವ ಕೆಲವು ಸಚಿವ-ಶಾಸಕರೇ ವಿದ್ಯಾವಂತರಾಗದಿದ್ದಾಗ ಶೈಕ್ಷಣಿಕ ಪ್ರಗತಿ ಹೇಗೆ ಸಾಧ್ಯ? ಭಾರತದ ಶ್ರೇಷ್ಠ ವಿಜ್ಞಾನಿ ಕಸ್ತೂರಿ ರಂಗನ್, ಪ್ರಿನ್ಸಟನ್ ವಿಶ್ವವಿದ್ಯಾಲಯದ ಮಂಜುಲ್ ಭಾರ್ಗವ ಸೇರಿದಂತೆ ವಿವಿಧ ಕ್ಷೇತ್ರದ ಖ್ಯಾತನಾಮರು ರಾಷ್ಟ್ರದ ಒಳಿತಿಗಾಗಿ ಭವಿಷ್ಯದ ಹಿತದೃಷ್ಟಿಯಿಂದ ತಮ್ಮ ಅಮೂಲ್ಯ ಸಮಯ ವ್ಯಯಿಸಿ ವೈಜ್ಞಾನಿಕವಾಗಿ ಹೊಸ ನೀತಿ ರೂಪಿಸಿದ್ದಾರೆ. ಯಾವುದೇ ಶಿಕ್ಷಣ ತಜ್ಞರ ಸಭೆ ನಡೆಸದೆ, ಅಭಿಪ್ರಾಯ ಸಂಗ್ರಹಿಸದೆ ಸರ್ಕಾರ ಹೊಸ ಶಿಕ್ಷಣ ನೀತಿ ತೆಗೆಯಲು ಮುಂದಾಗಿದೆ.

ಬೆಳಗಾವಿ ರಾಣಿ ಚೆನ್ನಮ್ಮ ವಿವಿ ವಿಶ್ರಾಂತ ಕುಲಪತಿ ಪ್ರೊ. ಶಿವಾನಂದ ಹೊಸಮನಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅವಶ್ಯ. ಅನೇಕ ಕ್ಯಾಂಪಸ್ ಸಂದರ್ಶನ ನಡೆದಾಗ ಉದ್ಯೋಗದಾತರಿಗೆ ನಿರೀಕ್ಷಿತ ಅಭ್ಯರ್ಥಿಗಳು ಸಿಗದಿರುವುದಕ್ಕೆ ಕಾರಣ ಹಳೇ ಶಿಕ್ಷಣ ನೀತಿಯಾಗಿದೆ. ಹೊಸ ಶಿಕ್ಷಣ ನೀತಿ ತೆಗೆದರೆ ಸಂಶೋಧನೆ ಕ್ಷೇತ್ರವೂ ಬಾಧಿತವಾಗಲಿದೆ ಎಂದು ಹೇಳಿದರು.

ಶಿಕ್ಷಣ‌ ತಜ್ಞ ಸುರೇಶ ಕುಲಕರ್ಣಿ, ಮಾಜಿ ಕವಿವಿ ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆ, ಭಾರತೀಯ ಶಿಕ್ಷಣ ಮಂಡಲದ ಶಾಲಾ ಪ್ರಕಲ್ಪ ಜಿಲ್ಲಾ ಪ್ರಮುಖ ವಿನಾಯಕ ಜೋಶಿ, ಪೀಪಲ್ಸ್ ಫೊರಮ್ ಫಾರ್ ಕರ್ನಾಟಕ ಎಜ್ಯುಕೇಶನ್ ಧಾರವಾಡ ಸಂಚಾಲಕ ಪ್ರತೀಕ ಮಾಳಿ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!