ಕಾಂಗ್ರೆಸ್ ಪ್ರಣಾಳಿಕೆ ಕುರಿತು ವಿವರಿಸುವೆ: ಪ್ರಧಾನಿ ಮೋದಿಗೆ ಪತ್ರ ಬರೆದು ಸಮಯಕೋರಿದ ಖರ್ಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ಪ್ರಣಾಳಿಕೆ ‘ನ್ಯಾಯ ಪತ್ರ’ ಕುರಿತು ವಿವರಿಸಲು ವೈಯಕ್ತಿಕ ಭೇಟಿಗೆ ಸಮಯಾವಕಾಶ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿಲ್ಲದ ವಿಷಯಗಳ ಬಗ್ಗೆ ಸಲಹೆಗಾರರು ನಿಮಗೆ(ಪ್ರಧಾನಿ ಮೋದಿಗೆ) ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಎರಡು ಪುಟಗಳ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ಜಾತಿ ಮತ್ತು ಸಮುದಾಯಗಳಲ್ಲಿ ಮೂಲೆ ಗುಂಪಾದವರಿಗೆ ನ್ಯಾಯ ಒದಗಿಸುವ ಗುರಿಯನ್ನು ಕಾಂಗ್ರೆಸ್ ಪ್ರಣಾಳಿಕೆ ಹೊಂದಿದೆ .ಪುಸ್ತಕಗಳಿಂದ ಕೆಲ ಪದಗಳನ್ನು ತೆಗೆದು ಕೋಮು ವಿಭಜನೆಯಂತಹ ಹೇಳಿಕೆ ಸೃಷ್ಟಿಸುವುದು ನಿಮಗೆ ಅಭ್ಯಾಸವಾಗಿದೆ. ಈ ರೀತಿ ಮಾತನಾಡುವ ಮೂಲಕ ಪ್ರಧಾನಿ ಕುರ್ಚಿಯ ಘನತೆಯನ್ನು ಕುಗ್ಗಿಸುತ್ತಿದ್ದೀರಿ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ನಿಮ್ಮ ಸಲಹೆಗಾರರು ನಿಮಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದ್ದರಿಂದ ಪ್ರಣಾಳಿಕೆಯನ್ನು ವಿವರಿಸಲು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ನಾನು ಬಯಸುತ್ತೇನೆ. ದೇಶದ ಪ್ರಧಾನಿಯಾಗಿದ್ದರಿಂದ ಜನರಿಗೆ ನೀವು ತಪ್ಪು ಮಾಹಿತಿ ಹಂಚಿಕೊಳ್ಳಬಾರದು’ ಎಂದು ಖರ್ಗೆ ತಿಳಿಸಿದ್ದಾರೆ.

ನಿಮ್ಮ ಭಾಷಣದಿಂದ ಆಘಾತವಾಗಲಿ, ಅಚ್ಚರಿಯಾಗಲಿ ಆಗಲಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ ನಿಮ್ಮ ಪಕ್ಷ ಹೀನಾಯ ಪ್ರದರ್ಶನ ನೀಡಿದ ನಂತರ ನೀವು ಮತ್ತು ನಿಮ್ಮ ಪಕ್ಷದ ನಾಯಕರು ಇಂತಹ ಹೇಳಿಕೆ ನೀಡುತ್ತೀರಿ ಎಂದು ನಿರೀಕ್ಷಿಸಲಾಗಿತ್ತು. ಹಾಗೆಯೇ ನಡೆದುಕೊಂಡಿದ್ದೀರಿ.ಕಾರ್ಮಿಕ ವರ್ಗ ಹೆಚ್ಚಿನ ತೆರಿಗೆ ಪಾವತಿ ಮಾಡಿದರೂ ನಿಮ್ಮ ‘ಸೂಟ್-ಬೂಟ್ ಕಿ ಸರ್ಕಾರ್’ ಕಾರ್ಪೊರೇಟ್‌ಗಳಿಗಾಗಿ ಕೆಲಸ ಮಾಡುತ್ತದೆ. ಬಡವರು ಉಪ್ಪು ಸಹಿತ ತಾವು ಖರೀದಿಸುವ ಎಲ್ಲ ಆಹಾರಗಳ ಮೇಲೆ ಜಿಎಸ್‌ಟಿ ಪಾವತಿಸುತ್ತಾರೆ. ಅದೇ ಶ್ರೀಮಂತ ದಣಿಗಳ ಜಿಎಸ್‌ಟಿ ಮರುಪಾವತಿಯಾಗುತ್ತದೆ. ನಾವು ಶ್ರೀಮಂತರು ಮತ್ತು ಬಡವರ ನಡುವಿನ ಅಸಮಾನತೆ ಬಗ್ಗೆ ಮಾತನಾಡಿದರೆ, ನೀವು ಅದನ್ನು ಹಿಂದೂ-ಮುಸ್ಲಿಮರಿಗೆ ಸಮೀಕರಿಸುತ್ತಿದ್ದೀರಿ’ ಎಂದು ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.

‘ನಿಮ್ಮ ಸ್ವಾತಂತ್ರ್ಯಪೂರ್ವ ಮಿತ್ರರಾದ ಮುಸ್ಲಿಂ ಲೀಗ್ ಮತ್ತು ವಸಾಹತುಶಾಹಿ ಯಜಮಾನರನ್ನು(ಬ್ರಿಟಿಷರು) ನೀವು ಇನ್ನೂ ಮರೆತಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಕುಟುಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!