ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ನಾಯಕರಾದ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮತ್ತು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರನ್ನು ಪಕ್ಷದ ರಾಜ್ಯಾಧ್ಯಕ್ಷರು ಉಚ್ಚಾಟನೆ ಮಾಡಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದ್ರೆ ಇದು ನಕಲಿಯಾಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಅವರು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಕಲಿ ಪತ್ರ ವೈರಲ್ ಆಗಿರುವುದರಿಂದ ನನಗೆ ಮತ್ತು ಪಕ್ಷಕ್ಕೆ ಮುಜುಗರ ಆಗಿದೆ. ಕಿಡಿಗೇಡಿಗಳು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ನಕಲಿ ಪತ್ರ ವೈರಲ್ ಆಗಿರುವುದರಿಂದ ನನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಆಗಿದೆ. ಈ ರೀತಿ ನಕಲಿ ಪತ್ರ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ ಸಿಎಂ ಇಬ್ರಾಹಿಂ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಎನ್ಡಿಎ ಜತೆ ಮೈತ್ರಿ ಘೋಷಣೆ ಮಾಡಿರುವುದಕ್ಕೆ ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಜೆಡಿಎಸ್ ಅಧ್ಯಕ್ಷ ತಾವು. ತಮ್ಮ ಅನುಮತಿ ಇಲ್ಲದೆ ಯಾವುದೇ ಮೈತ್ರಿ ಸಾಧ್ಯವಿಲ್ಲ. ನಾವು ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಅಲ್ಲದೆ, ತಮ್ಮ ಬಳಿ ಸಮಾಲೋಚನೆ ಮಾಡದೆ ಮೈತ್ರಿ ಘೋಷಣೆ ಮಾಡಿದ್ದಕ್ಕೆ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.