ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರ ಕಣ್ಣಿಗೂ ಕನ್ನಡಕ ಸಾಮಾನ್ಯವಾಗಿದೆ. ಗಂಟೆಗಟ್ಟಲೆ ಮೊಬೈಲ್, ಕಂಪ್ಯೂಟರ್ ವೀಕ್ಷಣೆ ಮತ್ತು ಪೌಷ್ಟಿಕಾಂಶದ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಆದರೆ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಕಣ್ಣಿನ ದೃಷ್ಟಿ ದೋಷದಿಂದ ದೂರವಿರಬಹುದು ಮತ್ತು ಕನ್ನಡಕ ಧರಿಸುವುದನ್ನು ತಪ್ಪಿಸಬಹುದು. ಕಣ್ಣಿನ ಆರೋಗ್ಯವನ್ನು ವೃದ್ಧಿಸುವ ಆ ಆಹಾರಗಳ ಬಗ್ಗೆ ತಿಳಿಯೋಣ.
ಕ್ಯಾರೆಟ್ ಮತ್ತು ಗೆಡ್ಡೆಗೆಣಸು
ಕಣ್ಣಿನ ದೃಷ್ಟಿ ಸುಧಾರಿಸಲು ಕ್ಯಾರೆಟ್ ಅತ್ಯುತ್ತಮ ಆಹಾರ. ಇದರಲ್ಲಿ ‘ಬೀಟಾ-ಕ್ಯಾರೋಟಿನ್’ ಮತ್ತು ವಿಟಮಿನ್ ‘ಎ’ ಸಮೃದ್ಧವಾಗಿದೆ. ಇದು ಕಣ್ಣಿನ ರೆಟಿನಾವನ್ನು ರಕ್ಷಿಸುತ್ತದೆ ಮತ್ತು ಇರುಳು ಕುರುಡುತನ ಬರದಂತೆ ತಡೆಯುತ್ತದೆ.
ಹಸಿರು ಎಲೆ ತರಕಾರಿಗಳು ಮತ್ತು ಸೊಪ್ಪು
ಪಾಲಕ್ ಸೊಪ್ಪು, ದಂಟಿನ ಸೊಪ್ಪು, ಬ್ರೊಕೊಲಿ ಮುಂತಾದ ತರಕಾರಿಗಳಲ್ಲಿ ‘ಲ್ಯೂಟಿನ್’ ಮತ್ತು ‘ಜೀಸಾಂಥಿನ್’ ಎಂಬ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿವೆ. ಇವು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತವೆ.
ಸಿಟ್ರಸ್ ಹಣ್ಣುಗಳು
ಕಿತ್ತಳೆ, ಮೂಸಂಬಿ, ನಿಂಬೆಹಣ್ಣು ಹಾಗೂ ನೆಲ್ಲಿಕಾಯಿಯಲ್ಲಿ ವಿಟಮಿನ್ ‘ಸಿ’ ಅಧಿಕವಾಗಿರುತ್ತದೆ. ಇದು ಕಣ್ಣಿನಲ್ಲಿರುವ ರಕ್ತನಾಳಗಳ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ವಯಸ್ಸಾಗುವಿಕೆಯಿಂದ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ದೂರವಿಡುತ್ತದೆ.
ಒಣ ಹಣ್ಣುಗಳು ಮತ್ತು ಬೀಜಗಳು
ಬಾದಾಮಿ, ವಾಲ್‌ನಟ್ಸ್, ಗೋಡಂಬಿ ಮತ್ತು ಅಗಸೆಬೀಜಗಳಲ್ಲಿ ವಿಟಮಿನ್ ‘ಇ’ ಹಾಗೂ ಒಮೆಗಾ-೩ ಕೊಬ್ಬಿನಾಮ್ಲಗಳು ಹೇರಳವಾಗಿವೆ. ಇವು ಕಣ್ಣುಗಳು ಒಣಗುವ ಸಮಸ್ಯೆಯನ್ನು ತಡೆದು, ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಮೀನು
ಮಾಂಸಾಹಾರಿಗಳಾಗಿದ್ದರೆ ಸಾಲ್ಮನ್ ಮತ್ತು ಟ್ಯೂನಾದಂತಹ ಮೀನುಗಳನ್ನು ಸೇವಿಸಿ. ಇವುಗಳಲ್ಲಿರುವ ಒಮೆಗಾ-೩ ಕೊಬ್ಬಿನಾಮ್ಲಗಳು ಕಣ್ಣಿನ ರೆಟಿನಾದ ಬೆಳವಣಿಗೆಗೆ ಮತ್ತು ಕಣ್ಣಿನ ತೇವಾಂಶವನ್ನು ಕಾಯ್ದುಕೊಳ್ಳಲು ಅತ್ಯಗತ್ಯ.
ಕಣ್ಣಿನ ರಕ್ಷಣೆಗೆ ಕೆಲವು ಸಲಹೆಗಳು:
ದಿನಕ್ಕೆ ಕನಿಷ್ಠ 8-10 ಲೋಟ ನೀರು ಕುಡಿಯಬೇಕು.
ಮೊಬೈಲ್/ಲ್ಯಾಪ್‌ಟಾಪ್ ಬಳಸುವಾಗ ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕು.
ರಾತ್ರಿ ಕತ್ತಲಲ್ಲಿ ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ.



