ಮಳೆಗಾಲ ಬಂತೆಂದರೆ ತಂಪಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಗೃಹಿಣಿಯರಿಗೆ ಮತ್ತು ಫ್ಯಾಷನ್ ಪ್ರೇಮಿಗಳಿಗೆ ಈ ಸಮಯದಲ್ಲಿ ಕಾಡುವ ಅತಿ ದೊಡ್ಡ ಚಿಂತೆ ಎಂದರೆ ಬಟ್ಟೆಗಳ ಸಂರಕ್ಷಣೆ. ವಾತಾವರಣದಲ್ಲಿರುವ ಅತಿಯಾದ ತೇವಾಂಶದ ಕಾರಣದಿಂದಾಗಿ ಕಪಾಟಿನಲ್ಲಿಟ್ಟ ದುಬಾರಿ ರೇಷ್ಮೆ ಸೀರೆಗಳು, ಸೂಟ್‌ಗಳು ಮತ್ತು ಹೆವಿ ಡ್ರೆಸ್‌ಗಳು ಬೇಗನೆ ಹಾಳಾಗುತ್ತವೆ. ಬಟ್ಟೆಗಳ ಬಣ್ಣ ಮಸಕಾಗುವುದು, ಫಂಗಸ್ ಅಥವಾ ಬೂಸ್ಟು ಹಿಡಿಯುವುದು ಮತ್ತು ಒಂದು ರೀತಿಯ ಕೆಟ್ಟ ವಾಸನೆ ಬರುವುದು ಮಳೆಗಾಲದಲ್ಲಿ ಸಹಜ.
ನಿಮ್ಮ ವಾರ್ಡ್‌ರೋಬ್‌ನಲ್ಲಿರುವ ದುಬಾರಿ ಬಟ್ಟೆಗಳನ್ನು ಮಳೆಗಾಲದ ಹಾನಿಯಿಂದ ರಕ್ಷಿಸಲು ಮತ್ತು ಅವುಗಳ ಹೊಳಪನ್ನು ಹಾಗೇ ಉಳಿಸಿಕೊಳ್ಳಲು ಕೆಲವು ಸರಳ ಟಿಪ್ಸ್‌ಗಳನ್ನು ಇಲ್ಲಿದೆ.
ಸಂಪೂರ್ಣವಾಗಿ ಒಣಗಿದ ನಂತರವೇ ಕಪಾಟಿನಲ್ಲಿಡಿ
ಮಳೆಗಾಲದಲ್ಲಿ ಬಟ್ಟೆಗಳು ಸುಲಭವಾಗಿ ಒಣಗುವುದಿಲ್ಲ. ಸ್ವಲ್ಪವೇ ತೇವವಿದ್ದರೂ ಬಟ್ಟೆಯನ್ನು ಮಡಚಿ ಕಪಾಟಿನಲ್ಲಿ ಇಡಬಾರದು. ಬಟ್ಟೆಯಲ್ಲಿ ತೇವಾಂಶ ಉಳಿದರೆ ಅದು ಬೂಸ್ಟು ಬೆಳೆಯಲು ಕಾರಣವಾಗುತ್ತದೆ. ಬಟ್ಟೆಗಳನ್ನು ಒಳಾಂಗಣದಲ್ಲಿ ಫ್ಯಾನ್ ಕೆಳಗೆ ಕನಿಷ್ಠ 24 ಗಂಟೆಗಳ ಕಾಲ ಒಣಗಿಸಿ, ಅವು ಸಂಪೂರ್ಣ ಡ್ರೈ ಆದ ನಂತರವೇ ವಾರ್ಡ್‌ರೋಬ್‌ಗೆ ಶಿಫ್ಟ್ ಮಾಡಬೇಕು.
ರೇಷ್ಮೆ ಸೀರೆಗಳಿಗೆ ಪ್ಲಾಸ್ಟಿಕ್ ಕವರ್ ಬಳಸಬಾರದು
ದುಬಾರಿ ಕಾಂಜೀವರಂ ಅಥವಾ ಮೈಸೂರು ಸಿಲ್ಕ್ ಸೀರೆಗಳನ್ನು ಎಂದಿಗೂ ಪ್ಲಾಸ್ಟಿಕ್ ಕವರ್‌ಗಳಲ್ಲಿ ಸಂಗ್ರಹಿಸಿಡಬಾರದು. ಪ್ಲಾಸ್ಟಿಕ್ ಗಾಳಿಯಾಡುವುದನ್ನು ತಡೆಯುತ್ತದೆ ಮತ್ತು ತೇವಾಂಶವನ್ನು ಒಳಗೇ ಉಳಿಸಿ ಸೀರೆಯ ಜರಿ ಕಪ್ಪಾಗುವಂತೆ ಮಾಡುತ್ತದೆ. ಇದಕ್ಕೆ ಬದಲಾಗಿ, ಸೀರೆಗಳನ್ನು ಕಾಟನ್ ಬಟ್ಟೆಯಲ್ಲಿ ಸುತ್ತಿದೆ ಇಡಬೇಕು.
ವಾರ್ಡ್‌ರೋಬ್‌ನಲ್ಲಿ ಸಿಲಿಕಾ ಜೆಲ್ ಬಳಸಬೇಕು
ಹೊಸ ಬೂಟುಗಳು ಅಥವಾ ಬ್ಯಾಗ್‌ಗಳನ್ನು ಕೊಂಡಾಗ ಸಿಗುವ ಸಣ್ಣ ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಎಸೆಯಬಾರದು. ಇವುಗಳನ್ನು ಕಪಾಟಿನ ಮೂಲೆಗಳಲ್ಲಿ ಮತ್ತು ಸೀರೆಗಳ ಮಧ್ಯೆ ಇಡಬೇಕು. ಸಿಲಿಕಾ ಜೆಲ್ ಕಪಾಟಿನಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಂಡು ಬಟ್ಟೆಗಳು ಒಣಗಿರುವಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ:
ನೈಸರ್ಗಿಕ ವಾಸನೆ ಮತ್ತು ಕೀಟನಾಶಕಗಳು
ಬಟ್ಟೆಗಳ ಕೆಟ್ಟ ವಾಸನೆ ನಿವಾರಿಸಲು ಮತ್ತು ಕೀಟಗಳಿಂದ ರಕ್ಷಿಸಲು ರಾಸಾಯನಿಕಯುಕ್ತ ನ್ಯಾಫ್ತಲಿನ್ ಗುಳಿಗೆಗಳಿಗಿಂತ ನೈಸರ್ಗಿಕ ವಸ್ತುಗಳು ಬೆಸ್ಟ್. ಹಾಗಾಗಿ ಒಣ ಬೇವಿನ ಎಲೆಗಳನ್ನು ಸಣ್ಣ ಕಾಟನ್ ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಇಡಬೇಕು ಹಾಗೂ ಲವಂಗ ಮತ್ತು ಕರ್ಪೂರ ಬ್ಯಾಕ್ಟೀರಿಯಾಗಳನ್ನು ದೂರವಿಡುತ್ತವೆ ಮತ್ತು ಬಟ್ಟೆಗಳು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತವೆ.
ವಾರ್ಡ್‌ರೋಬ್ ಗೋಡೆಯಿಂದ ದೂರವಿರಬೆಕು
ಮಳೆಗಾಲದಲ್ಲಿ ಮನೆಯ ಗೋಡೆಗಳು ತೇವವನ್ನು ಹೀರಿಕೊಳ್ಳುತ್ತವೆ. ಬಟ್ಟೆ ಕಪಾಟು ಗೋಡೆಗೆ ಅಂಟಿಕೊಂಡಿದ್ದರೆ, ಆ ತೇವಾಂಶ ಕಪಾಟಿನ ಒಳಗೂ ಹರಡುತ್ತದೆ. ಆದ್ದರಿಂದ ವಾರ್ಡ್‌ರೋಬ್ ಅನ್ನು ಗೋಡೆಯಿಂದ ಕನಿಷ್ಠ 2-3 ಇಂಚು ದೂರವಿಡಬೇಕು.



