ಹೊಸದಿಗಂತ ವರದಿ ಮಡಿಕೇರಿ:
ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭ ಆನೆ ದಾಳಿಗೊಳಗಾಗಿ ಆರ್.ಆರ್.ಟಿ.ಸಿಬ್ಬಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಕೆದಕಲ್ ಗ್ರಾಮಕ್ಕೆ ಭೇಟಿ ನೀಡಿದ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳ ತುರ್ತು ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆದಕಲ್ ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕರು, ಕೊಡಗು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದಲೂ ಆನೆ-ಮಾನವ ಸಂಘರ್ಷ ನಡೆಯುತ್ತಿದ್ದರೂ, ಅಧಿಕಾರಿಗಳು ವ್ಯವಸ್ಥಿತವಾಗಿ ಸರ್ಕಾರದ ಗಮನಕ್ಕೆ ತರದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗುಡುಗಿದರಲ್ಲದೆ, ಮುಂದೆ ವನ್ಯ ಪ್ರಾಣಿಗಳಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮವಹಿಸಬೇಕೆಂದು ಅದೇಶಿಸಿದರು.
ಕಾಡಿನಿಂದ ಆನೆಗಳು ಜನವಸತಿ ಪ್ರದೇಶಗಳು, ತೋಟಗಳಿಗೆ ಬರದಂತೆ ರೈಲ್ವೆ ಕಂಬಿಯ ಬೇಲಿ, ಆನೆ ಕಂದಕ, ಸೋಲಾರ್ ತಂತಿಗಳನ್ನು ತತ್ ಕ್ಷಣವೇ ಅಳವಡಿಸುವಂತೆ ಸೂಚಿಸಿದ ಮಂಥರ್ ಗೌಡ ಅವರು, ಅದಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಕಾಡಾನೆಗಳ ಹಾವಳಿ ವಿಚಾರವಾಗಿ ಗ್ರಾಮಸ್ಥರೊಂದಿಗೂ ಚರ್ಚಿಸಿ ಮಾಹಿತಿ ಪಡೆದ ಶಾಸಕರು, ತಕ್ಷಣವೇ ಆನೆಗಳನ್ನು ಕಾಡಿಗಟ್ಟುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರಲ್ಲದೆ, ಬೇಕಾಗುವ ಸಂಪೂರ್ಣವಾದ ಸಹಕಾರವನ್ನು ಸರ್ಕಾರದಿಂದ ನೀಡುವುದಾಗಿ ಭರವಸೆ ನೀಡಿದರು. ಯಾವುದೇ ಸಂದರ್ಭ ಗ್ರಾಮಸ್ಥರು ಅಧಿಕಾರಿಗಳಿಗೆ ಕರೆ ಮಾಡಿದಲ್ಲಿ ತಕ್ಷ ಸ್ಪಂದಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ ಪೂವಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಮಡಿಕೇರಿ ಮತ್ತು ಕುಶಾಲನಗರ ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್, ಕೆದಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿಗಖು, ಕೆದಕಲ್, ಹೊರೂರು ಮಠ, ಭೂತನಕಾಡು, ಮೋದೂರು ಭಾಗದ ಗ್ರಾಮಸ್ಥರು, ಸಂತ್ರಸ್ತರು ಉಪಸ್ಥಿತರಿದ್ದರು.