ಹೊಸ ದಿಗಂತ ವರದಿ, ಹಾವೇರಿ:
ಮಹಾತ್ಮ ಗಾಂಧಿ ಕಾಂಗ್ರೆಸ್‌ಗೂ ಇಂದಿನ ಕಾಂಗ್ರೆಸ್‌ಗೂ ಬಹಳ ವ್ಯತ್ಯಾಸ ಇದೆ. ಅಸಲಿ ಕಾಂಗ್ರೆಸ್‌ಗೂ ನಕಲಿ ಕಾಂಗ್ರೆಸ್‌ಗೂ ವ್ಯತ್ಯಾಸ ಇದೆ. ಮಹಾತ್ಮಾ ಗಾಂಧೀಜಿಯವರ ತದ್ವಿರುದ್ಧವಾಗಿ ಈಗಿನ ಕಾಂಗ್ರೆಸ್‌ನವರು ನಡೆದುಕೊಳ್ಳುತ್ತಿದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ರೀತಿ ಆಡಳಿತವೇ ಇಲ್ಲ. ಎಲ್ಲಾ ಇಲಾಖೆಗಳು, ನಿಗಮಗಳಲ್ಲಿ ಭ್ರಷ್ಟಾಚಾರ ನಡೆದಿದೆ. ದೀನ ದಲಿತರ ಅನುದಾನದಲ್ಲೇ ಭ್ರಷ್ಟಾಚಾರ ನಡೆಸಿದ್ದಾರೆ. ಗಾಂಧಿಯವರ ಸ್ವರಾಜ್ಯಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಧಿವೇಶನಕ್ಕೆ ಸರ್ಕಾರದ ಹಣ ಬಳಸುತ್ತಿರುವುದು ಎಷ್ಟು ಸರಿ? ಇದು ಯಾವ ಕಾನೂನಿನಲ್ಲಿದೆ? ರಾಜಕೀಯ ಸಮ್ಮೇಳನಗಳಿಗೆ ಸರ್ಕಾರದ ಹಣ ಬಳಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ಅವರು, ಗಾಂಧೀಜಿಯವರನ್ನು ಮುಂದಿಟ್ಟುಕೊಂಡು ತಮ್ಮ ಬ್ಯಾನರ್ ಹಾಕಿಕೊಂಡು ಅಧಿವೇಶನ ಮಾಡುತ್ತಿದ್ದಾರೆ. ಅಸಲಿ ಗಾಂಧಿ ಹೆಸರಲ್ಲಿ, ನಕಲಿ ಕಾಂಗ್ರೆಸ್ ಅಧಿವೇಶನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರದ ಮಧದಿಂದ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳನ್ನು ದಮನ ಮಾಡಲು ಪ್ರಜಾಪ್ರಭುತ್ವ ವಿರೋಧಿ ಕ್ರಮ ಅನುಸರಿಸುತ್ತಿದ್ದಾರೆ. ಇಂಥ ಪ್ರಕರಣಗಳು ಸಾಕಷ್ಟು ನಡೆದಿವೆ. ಆದರೆ ಇನ್ನೂ ಕೆಲವು ಪ್ರಕರಣ ಬೆಳಕಿಗೆ ಬಂದಿಲ್ಲ. ಸರಕಾರ ಪೊಲೀಸ್ ಸ್ಟೇಷನ್‌ಗಳಲ್ಲಿ ಡೀಲ್ ವ್ಯವಸ್ಥೆ ಮಾಡಿದೆ. ಗೃಹ ಸಚಿವರೇ ಏನೂ ನಡೆದಿಲ್ಲ, ಗೊತ್ತಿಲ್ಲ ಅಂತ ಮಾತಾಡುತ್ತಾರೆ. ಸಿಎಂ ಉಡಾಫೆ ಉತ್ತರ ಕೊಡುತ್ತಾರೆ. ಈ ಘಟನೆಗಳು ತುರ್ತು ಪರಿಸ್ಥಿತಿ ನೆನಪಿಸುತ್ತಿದೆ. ಶಾಸಕ ಮುನಿರತ್ನ ಮೇಲೆ ಆರೋಪ ಇದೆ. ಅದನ್ನು ಕೋರ್ಟ್‌ನಲ್ಲಿ ಅವರು ಎದುರಿಸುತ್ತಾರೆ. ಅವರ ಮೇಲೆ ಮೊಟ್ಟೆ ಒಗೆಯುತ್ತಾರೆ ಅಂದರೆ ಯಾವ ಮಟ್ಟಕ್ಕೆ ಸರ್ಕಾರ ಇಳಿದಿದೆ? ಜನ ಪ್ರತಿನಿಧಿಗಳು ನಿರ್ಭೀತಿ, ನಿರ್ಭಯದಿಂದ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಮುನಿರತ್ನ ನಾಟಕ ಮಾಡುತ್ತಿದ್ದಾರೆಂಬ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಉಂಟಾ? ನಮ್ ಮೇಲೆ ನಾವೇ ಮೊಟ್ಟೆ ಹಾಕಿಸಿಕೊಂಡು ಅವಮಾನ ಮಾಡಿಸಿಕೊಳ್ಳೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಗೆ ಧರ್ಮಸ್ಥಳಕ್ಕೆ ಬರಲಿ ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಅದು ಅವರವರಿಗೆ ಬಿಟ್ಟಿದ್ದು ದೇವರು ನಂಬಿಕೆ ಅವರವರ ವೈಯಕ್ತಿಕ ವಿಚಾರ. ಸಿ.ಟಿ. ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರೂ ದೂರು ಕೊಟ್ಟಿದ್ದಾರೆ. ಒಂದು ಕಡೆ ಕಂಪ್ಲೇಂಟ್‌ಗೆ ಕೂಡಲೇ ಕ್ರಮ ಕೈಗೊಳ್ಳುತ್ತಾರೆ. ಆದರೆ ಸಿ.ಟಿ. ರವಿ ದೂರು ಕೊಟ್ಟಿರುವುದನ್ನು ಎಫ್‌ಐಆರ್ ಮಾಡೇ ಇಲ್ಲ. ಹೈಕೋರ್ಟ್ ಮದ್ಯಪ್ರವೇಶ ಮಾಡದಿದ್ದರೆ ಸಿ.ಟಿ. ರವಿ ಅವರ ಪರಿಸ್ಥಿತಿ ಏನು ಆಗ್ತಿತ್ತೋ ಗೊತ್ತಿಲ್ಲ ಎಂದರು.
ರಾಜ್ಯ ಸರ್ಕಾರದಿಂದ ಹಾಲಿನ ದರ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದಿಂದ ಬೆಲೆ ಏರಿಕೆ ಪರ್ವ ನಡೆದಿದೆ. ಸ್ಡಾಂಪ್ ಡ್ಯೂಟಿ, ಅಬಕಾರಿ ತೆರಿಗೆ ಸೇರಿದಂತೆ ಎಲ್ಲದರ ತೆರಿಗೆ ಹೆಚ್ಚಿಸಿದ್ದಾರೆ. ೧೫,೦೦೦ ಕೋಟಿ ರೂಪಾಯಿ ಹೊಸ ತೆರಿಗೆ ಹಾಕಿದ್ದಾರೆ. ಹಾಲಿನ ದರ, ನೀರಿನ ದರ ಎಲ್ಲದರಲ್ಲೂ ತೆರಿಗೆ ಹೆಚ್ಚಿಗೆ ಮಾಡಿದ್ದಾರೆ. ಜನ ಸಾಮಾನ್ಯರು ಬಳಕೆ ಮಾಡುವಂತ ಎಲ್ಲಾ ವಸ್ತುಗಳ ದರ ಹೆಚ್ಚಳ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಮರಳು, ಜಲ್ಲಿ ಕೂಡ ಇನ್ನಷ್ಟು ತುಟ್ಟಿ ಆಗಲಿದೆ. ಪ್ರತಿ ಆರ್ಥಿಕ ಚಟುವಟಿಕೆ ಮೇಲೆ ತೆರಿಗೆ ಹಾಕುತ್ತಿದ್ದಾರೆ. ಮುಂದೆ ಇವರು ಗಾಳಿಗೂ ತೆರಿಗೆ ಹಾಕುವ ಕಾಲ ದೂರ ಇಲ್ಲ ಎಂದು ಚಾಟಿ ಬೀಸಿದರು.