ಹೊಸ ದಿಗಂತ ವರದಿ, ಮಂಡ್ಯ :
ಬೆಳಗಾವಿಯಲ್ಲಿ ಕೊಟ್ಯಾಂತರ ರೂ. ಖರ್ಚು ಮಾಡಿ ನಡೆಸಲಾಗುತ್ತಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರ ಬದಲಾಗಿ ನಕಲಿ ಗಾಂಧಿಗಳ ಫೋಟೋಗಳೇ ರಾರಾಜಿಸುತ್ತಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.
ಸುದ್ಧಿಗಾರರೊಂದಿಗೆ ಮಾತಾಡಿದ ಅವರು, ಗಾಂಧೀಜಿ ಹೆಸರಲ್ಲಿ ಕಾರ‌್ಯಕ್ರಮ ಮಾಡಲು ನನ್ನ ತಕರಾರಿಲ್ಲ. ಆದರೆ ಸಂಘಟಿತ ಹೋರಾಟದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಗಾಂಧೀಜಿ ರಾಮರಾಜ್ಯದ ಪರಿಕಲ್ಪನೆ ಇಂದು ರಾಜ್ಯದಲ್ಲಿದೆಯಾ ಎಂದು ಪ್ರಶ್ನಿಸಿದರು.
ಸಂಸದನಾಗಿ ಮಂಡ್ಯದಲ್ಲಿ 2ನೇ ದಿಶಾ ಸಭೆಯಲ್ಲಿ ಭಾಗವಹಿಸಿದ್ದೇನೆ. ಕೇಂದ್ರ ಸರ್ಕಾರ ಹಲವು ಯೋಜನೆಗಳು ಜನಸಾಮಾನ್ಯರಿಗೆ ಸಹಕಾರಿಯಾಗಿವೆ. ಈ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಿದ್ದೇನೆ. ಮುಂದಿನ ವರ್ಷ ಕೇಂದ್ರ ಸರ್ಕಾರವೇ ಗಾಂಧಿ ಹೆಸರಲ್ಲಿ ಕಾರ್ಕ್ರಮ ರೂಪಿಸಿದೆ. ಆದಕ್ಕೂ ಮುನ್ನ ರಾಜ್ಯ ಸರ್ಕಾರ ಕಾಂಗ್ರೆಸ್ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ನಕಲಿ ಕಾಂಗ್ರೆಸ್
ಇದು ಅಸಲಿ ಕಾಂಗ್ರೆಸ್ ಅಲ್ಲ. ನಕಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿರುವ ಕಾರ್ಯಕ್ರಮ. ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಗಾಂಧೀಜಿ ಅಂದೇ ಹೇಳಿದ್ದರು. ಇದು ಆಲಿಬಾಬ ಮತ್ತು 40 ಮಂದಿ ಕಳ್ಳರು ಇದ್ದಾರಲ್ಲ. ಆ ರೀತಿಯ ಕಾಂಗ್ರೆಸ್ ಇದೆ ಎಂದು ಲೇವಡಿಗೈದರು.
ಗಾಂಧೀಜಿ ಹೆಸರು ಹೇಳಿದರೆ ಆಗಲ್ಲ, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ಕೋಟ್ಯಾಂತರ ರೂ. ಜನರ ದುಡ್ಡು ಖರ್ಚು ಮಾಡಿ ಏನು ಸಂದೇಶ ಕೊಡುತ್ತೀರಿ? ಇದು ನಾಗರೀಕ ಸರ್ಕಾರವೇ, ಇಂತಹ ವಾತಾವರಣ ಎಂದೂ ನೋಡಿಲ್ಲ. ಮುಂದಿನ ದಿನ ಎಲ್ಲಿ ಹೋಗಿ ನಿಲ್ಲಲಿದೆ ಎಂದು ಬೇಸರ ವ್ಯಕ್ತಪಡಿಸಿದರು.