November 3, 2026
Tuesday, November 3, 2026
spot_img

ಫೈಜರ್ ಬ್ರಾಂಡ್ ಹೆಸರಿನ ನಕಲಿ ಔಷಧಿ ದಂಧೆ ತನಿಖೆ ತೀವ್ರ: ಬೆಂಗಳೂರಿನ 5 ಕಡೆ ‘ಇಡಿ’ ಅಧಿಕಾರಿಗಳಿಂದ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಭಾಗಗಳಲ್ಲಿ ಆಸ್ಪತ್ರೆಗಳು ಹಾಗೂ ಫಾರ್ಮಾಸಿಗಳಿಗೆ ಅತ್ಯಂತ ದುಬಾರಿ ಬೆಲೆಯ ನಕಲಿ ಆಂಟಿಬಯೋಟಿಕ್ ಔಷಧಿಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ಜಾಲದ ಮೇಲೆ ಜಾರಿ ನಿರ್ದೇಶನಾಲಯ (ED) ಸೋಮವಾರ ಭರ್ಜರಿ ದಾಳಿ ನಡೆಸಿದೆ.

ಅಗ್ಗದ ಜನರಿಕ್ ಔಷಧಿಗಳನ್ನು ಜಾಗತಿಕ ಔಷಧ ಕಂಪನಿ ‘ಫೈಜರ್’ (Pfizer) ಬ್ರಾಂಡ್‌ನ ಹೆಸರಿನಲ್ಲಿ ಮರುಪ್ಯಾಕ್ ಮಾಡಿ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

ಈ ಆಪರೇಷನ್ ವೇಳೆ ದಂಧೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವೀರೇಶ್ ಕುಮಾರ್ ಎಂಬಾತನ ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದು, ಅದರಲ್ಲಿದ್ದ ಸುಮಾರು 9 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಹಲವು ಡಿಜಿಟಲ್ ಸಾಧನಗಳು ಮತ್ತು ಆರ್ಥಿಕ ವಹಿವಾಟಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಬಿಡದಿಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿತ್ತು ನಕಲಿ ಮ್ಯಾನುಫ್ಯಾಕ್ಚರಿಂಗ್

ಕಳೆದ ಆಗಸ್ಟ್ 18ರಂದು ಬಿಡದಿ ಸಮೀಪದ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಕೆ. ತಾಂಡ್ಯ ಗ್ರಾಮದ ಫಾರ್ಮ್‌ಹೌಸ್ ಒಂದರ ಮೇಲೆ ಪೊಲೀಸರು ಮತ್ತು ಆಹಾರ ಸುರಕ್ಷತೆ ಹಾಗೂ ನಿಯಂತ್ರಣ ಮಂಡಳಿ ಜಂಟಿ ದಾಳಿ ನಡೆಸಿದ್ದವು. ಈ ವೇಳೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಬರೋಬ್ಬರಿ 4.91 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಿಗಳನ್ನು ಜಪ್ತಿ ಮಾಡಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಸಿಐಆರ್ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದರು. ಸದ್ಯ ಕರ್ನಾಟಕ ಸರ್ಕಾರವೂ ಈ ಜಾಲದ ತನಿಖೆಗೆ 6 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ.

 ಫೈಜರ್ ಲೇಬಲ್ ಅಂಟಿಸಿ ಆಸ್ಪತ್ರೆಗಳಿಗೇ ಸಪ್ಲೈ ಮಾಡ್ತಿದ್ರು

ಇಡಿ ತನಿಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ದಂಧೆಯ ಕಿಂಗ್‌ಪಿನ್ ಆರ್. ಪ್ರಶಾಂತ್ ಎಂಬಾತ ಯಾವುದೇ ಲೈಸೆನ್ಸ್ ಇಲ್ಲದೆ ಔಷಧಿಗಳನ್ನು ಮರುಪ್ಯಾಕ್ ಮಾಡಲು ಈ ಫಾರ್ಮ್‌ಹೌಸ್ ವ್ಯವಸ್ಥೆ ಮಾಡಿದ್ದ. ವಿವಿಧ ರಾಜ್ಯಗಳಿಂದ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಸರಣಿ ಜನರಿಕ್ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದ ಈ ಗ್ಯಾಂಗ್, ಅವುಗಳನ್ನು ಹೊಸ ವಯಲ್ಸ್‌ಗಳಿಗೆ ತುಂಬಿಸಿ ಅದರ ಮೇಲೆ ಫೈಜರ್ ಕಂಪನಿಯ ದುಬಾರಿ ಆಂಟಿಬಯೋಟಿಕ್‌ಗಳಾದ ‘ಝಾವಿಸೆಫ್ಟಾ’ (Zavicefta) ಮತ್ತು ‘ಎಂಬ್ಲಾವಿಯೋ’ (Emblaveo) ಎಂಬ ಲೇಬಲ್‌ಗಳನ್ನು ಅಂಟಿಸುತ್ತಿತ್ತು.

ಆಸ್ಪತ್ರೆಗಳಿಗೆ ವಂಚನೆ

ಕಣ್ಣಿಗೆ ಅಸಲಿ ಫೈಜರ್ ಆಂಟಿಬಯೋಟಿಕ್‌ನಂತೆ ಕಾಣುವ ಈ ನಕಲಿ ಬಾಟಲಿಗಳನ್ನು ‘ಡಿಎಂ ಫಾರ್ಮಾಸ್ಯುಟಿಕಲ್ಸ್’ ಮತ್ತು ‘ಕೃಪಾ ಹೆಲ್ತ್‌ಕೇರ್’ ಎಂಬ ಸಂಸ್ಥೆಗಳ ಮೂಲಕ ಇತರ ಪ್ರಮುಖ ಫಾರ್ಮಾ ಕಂಪನಿಗಳು ಹಾಗೂ ದೊಡ್ಡ ಆಸ್ಪತ್ರೆಗಳಿಗೆ ಅಸಲಿ ಔಷಧಿಗಳ ಜೊತೆಗೆ ಬೆರೆಸಿ ಸರಬರಾಜು ಮಾಡಲಾಗುತ್ತಿತ್ತು. ಯಾರಿಗೂ ಅನುಮಾನ ಬಾರದಂತೆ ಈ ದಂಧೆಕೋರರು ನೆಟ್‌ವರ್ಕ್ ಸೃಷ್ಟಿಸಿದ್ದರು.

ಪ್ರಸ್ತುತ ಈ ನಕಲಿ ಜಾಲ ಎಲ್ಲೆಲ್ಲಿ ಹರಡಿದೆ ಮತ್ತು ಯಾರೆಲ್ಲಾ ಆಸ್ಪತ್ರೆಗಳು ಇವರಿಂದ ವಂಚನೆಗೆ ಒಳಗಾಗಿವೆ ಎಂಬುದರ ಕುರಿತು ಹಾಗೂ ಈ ಅಕ್ರಮ ಹಣದ ಹರಿವಿನ ಮೂಲವನ್ನು ಪತ್ತೆ ಹಚ್ಚಲು ಜಾರಿ ನಿರ್ದೇಶನಾಲಯ ಮುಂದಿನ ತನಿಖೆ ಕೈಗೊಂಡಿದೆ.

Must Read

Skip to toolbar