ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿದ ಲೋಕಸಭೆಯ ಹಾಲಿ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಅವರ ಅರ್ಹತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಕಲಿ ವರದಿಗಳನ್ನು 24 ಗಂಟೆಯೊಳಗೆ ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣಗಳಾದ ಗೂಗಲ್ ಹಾಗೂ ಎಕ್ಸ್(ಟ್ವಿಟ್ಟರ್)ಗೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಐಎಎಸ್ ಅಧಿಕಾರಿಅಂಜಲಿ ಬಿರ್ಲಾ ಅವರು ಅವರ ತಂದೆಯ ಪ್ರಭಾವದಿಂದಾಗಿ ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಪಾಸು ಮಾಡಿದ್ದರು ಎಂಬ ಹಲವು ವರದಿಗಳು ಸಾಮಾಜಿಕ ಜಾಲತಾಣಗಳು ಸೇರಿದಂತೆ ಸಣ್ಣಪುಟ್ಟ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಇದಾದ ನಂತರ ಕೇಂದ್ರ ಲೋಕಸೇವಾ ಆಯೋಗವೂ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ, ಅಂಜಲಿ ಬಿರ್ಲಾ 2019ರಲ್ಲಿ ಯುಪಿಎಸ್ ಪರೀಕ್ಷೆ ಬರೆದಿದ್ದು, 2020ರಲ್ಲಿ ಸೇವೆಗೆ ಆಯ್ಕೆಯಾಗಿದ್ದರು ಎಂದು ಹೇಳಿತ್ತು. ಇದರ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಮಾನಹಾನಿಕರ ನಕಲಿ ವರದಿಗಳು ಹರಿದಾಡುತ್ತಲೇ ಇದ್ದವು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಮಾನ ಹಾನಿ ಪ್ರಕರಣ ದಾಖಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯವೂ ಗೂಗಲ್, ಎಕ್ಸ್, ಕೇಂದ್ರ ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಕೆಲ ಅಪರಿಚಿತ ಪ್ರತಿವಾದಿಗಳಿಗೆ ನೊಟೀಸ್ ನೀಡಿದ್ದು, 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.
ಜೊತೆಗೆ ಗೂಗಲ್ ಹಾಗೂ ಎಕ್ಸ್‌ಗಳಲ್ಲಿ ಇರುವ ಈ ವಿಚಾರಕ್ಕೆ ಸಂಬಂಧಿತ ಎಲ್ಲಾ ಪೋಸ್ಟ್‌ಗಳನ್ನು ಅಳಿಸಿ ಹಾಕುವಂತೆ ಸೂಚಿಸಿದೆ. ಅಲ್ಲದೇ ತಮಗೂ ಯಾವುದಾದರೂ ಈ ವಿಚಾರಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಕಂಡು ಬಂದಲ್ಲಿ ಗೂಗಲ್ ಹಾಗೂ ಎಕ್ಸ್‌ಗೆ ಮಾಹಿತಿ ನೀಡುವಂತೆ ಅಂಜಲಿ ಬಿರ್ಲಾಗೂ ಸೂಚಿಸಿದೆ.
ಅಂಜಲಿ ಬಿರ್ಲಾ ಅವರು ತಮ್ಮ ಮಾನನಷ್ಟ ಮೊಕದ್ದಮೆಯಲ್ಲಿ ಉಲ್ಲೇಖಿಸಿರುವ ವಿಚಾರಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪೋಸ್ಟ್ ಮಾಡುವುದು, ಪ್ರಸಾರ ಮಾಡುವುದು, ಸಂವಹನ ಮಾಡುವುದು, ಟ್ವೀಟ್ ಮಾಡುವುದು ಅಥವಾ ಮರುಟ್ವೀಟ್ ಮಾಡುವುದನ್ನು ನಿಲ್ಲಿಸುವಂತೆ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು ಅರ್ಜಿ ವಿಚಾರಣೆ ವೇಳೆ ಹೇಳಿದ್ದಾರೆ.
ವಿಚಾರಣೆ ವೇಳೆ ಅಂಜಲಿ ಬಿರ್ಲಾ ಪರ ವಕೀಲರು ಆಕೆ ಯುಪಿಎಸ್‌ಸಿ ಪರೀಕ್ಷೆ ಬರೆದು ಆಯ್ಕೆಯಾದ ದಾಖಲೆಗಳ ಮಾಹಿತಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದರು.