ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಶ್ರಮಿಸಿ: ನಂದೀಶ್ ರೆಡ್ಡಿ

ಹೊಸದಿಗಂತ ವರದಿ, ಮೈಸೂರು:

ಜಿ.ಪಂ, ತಾ.ಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದು. ಹಾಗಾಗಿ ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಕ್ಷ ಗೆಲ್ಲುವುದಕ್ಕಾಗಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟಿತರಾಗಿ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ನಂದೀಶ್‌ರೆಡ್ಡಿ ತಿಳಿಸಿದರು.

ಮಂಗಳವಾರ ನಗರದ ಬೋಗಾದಿ ವೃತ್ತದಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮೈಸೂರು ಗ್ರಾಮಾಂತರ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಕೇಂದ್ರದ ನಾಯಕರು, ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನೂ ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ. ಪ್ರತಿ ದಿನವೂ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ದೂರವಾಣಿ ಕರೆಗಳನ್ನು ಮಾಡುವ ಮೂಲಕ ಪಕ್ಷದ ಚಟುವಟಿಕೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ಪಕ್ಷವನ್ನು ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರ ಗುರಿಯಾಗಿರಬೇಕು. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತಾಗಬೇಕು ಎಂದು ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ರೂಗಳನ್ನು ಕೊಳ್ಳೆ ಹೊಡೆಯಲಾಗಿದೆ. ಇಷ್ಟೊಂದು ಹಣ ಹೊರ ರಾಜ್ಯಗಳಲ್ಲಿನ ಕೆಲವು ವ್ಯಕ್ತಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಗೊಳ್ಳುವುದಕ್ಕೆ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ. ಸಂಬoಧಿಸಿದ ವ್ಯಕ್ತಿಯ ಸಹಿ, ಅನುಮತಿಯಿಲ್ಲದೆ ೫ ಲಕ್ಷರೂಗೂ ಮೇಲ್ಪಟ್ಟ ಹಣವನ್ನು ಬ್ಯಾಂಕಿನವರು ಬೇರೆ ವ್ಯಕ್ತಿಗಳ ಖಾತೆಗೆ ಹಣ ವರ್ಗಾವಣೆ ಮಾಡುವುದಿಲ್ಲ ಎಂಬ ಸಾಮಾನ್ಯ ಅರಿವು ಕೂಡ ಸಿದ್ದರಾಮಯ್ಯನವರಿಗೆ ಇಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘುಕೌಟಿಲ್ಯ ಮಾತನಾಡಿ, ಜಿ.ಪಂ, ತಾ.ಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯಾವ ಕ್ಷಣದಲ್ಲಾದರೂ ಘೋಷಣೆಯಾಗಬೇಕು. ಈ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲು ತಳಮಟ್ಟದಲ್ಲಿ ಸಂಘಟನೆ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ವಹಿಸಿದ್ದರು. ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಮಾಜಿ ಶಾಸಕರುಗಳಾದ ಹರ್ಷವರ್ಧನ್, ಎನ್.ಬಾಲರಾಜು, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರುಗಳಾದ ಎಸ್.ಮಹದೇವಯ್ಯ, ಹೇಮಂತ್‌ಕುಮಾರ್‌ಗೌಡ, ಪುಟ್ಟಬುದ್ಧಿ, ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಮಡವಾಡಿ, ಕಿರಣ್ ಜಯರಾಮೇಗೌಡ, ವಕ್ತಾರ ದಯಾನಂದ ಪಟೇಲ್, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಅನಿಲ್ ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!