ಗುಂಡಿಗೆ ಬೀಳೋದು ಸಾಮಾನ್ಯ, ಆದರೆ ನೀವು ಬಿದ್ದು ಏಳ್ತೀರೋ, ಅಲ್ಲೇ ಇರ‍್ತೀರೋ ಯೋಚಿಸಿ..

ಕಪ್ಪೆಗಳ ಗುಂಪು ಕಾಡಿನಲ್ಲಿ ಜಾಲಿ ಮಾಡುತ್ತಾ ನಡೆದಾಡುತ್ತಿದ್ದವು. ಈ ವೇಳೆ ಕಾಣದೇ ಒಂದು ಕಪ್ಪೆ ಹೊಂಡಕ್ಕೆ ಬಿದ್ದುಬಿಟ್ಟಿತು. ಇನ್ನೇನು ಅಷ್ಟು ದೊಡ್ಡ ಹೊಂಡಕ್ಕೆ ಬಿದ್ದ ಮೇಲೆ ಜೀವನವೇ ಮುಗಿದುಹೋಯ್ತಲ್ಲಾ? ಉಳಿದ ಕಪ್ಪೆಗಳು ಬಿದ್ದ ಕಪ್ಪೆಯನ್ನು ಅಯ್ಯೋ ಪಾಪ ಎನ್ನುವಂತೆ ನೋಡಿದವು. ಬಗ್ಗಿ ನೋಡಲು ಹೋಗಿ ಇನ್ನೆರಡು ಕಪ್ಪೆ ಗುಂಡಿಗೆ ಬಿತ್ತು.

ಬಿದ್ದ ಕಪ್ಪೆಗಳು ಎಲೆ, ಬೇರುಗಳ ಸಹಾಯದಿಂದ ಮೇಲೇರಲು ಯತ್ನಿಸುತ್ತಿದ್ದವು. ಆಗುತ್ತಿರಲಿಲ್ಲ. ಮೇಲಿದ್ದ ಉಳಿದ ಕಪ್ಪೆಗಳು ಸಾಕು ಪ್ರಯತ್ನ ಮಾಡಬೇಡಿ. ನಿಲ್ಲಿಸಿ, ಅಲ್ಲಿಯೇ ಇರಿ, ನಾವು ಬೇಕಾದ ಆಹಾರ ಕೊಡ್ತೇವೆ ಎಂದವು. ಆಗ ಇನ್ನೊಂದು ಕಪ್ಪೆ ಸುಳ್ಳೆ ಸುಳ್ಳೆ ಹೇಳ್ಬೇಡ. ನಮಗೇ ತಿನ್ನೋಕೆ ಏನಿಲ್ಲ, ಇನ್ನು ಇವುಗಳಿಗೆ ಏನು ಕೊಡೋದು ಎಂದರು. ಹೀಗೆ ಅವರವರ ಮಧ್ಯೆ ಮಾತುಕತೆ ನಡೀತಿತ್ತು. ಒಂದೇ ಒಂದು ಕಪ್ಪೆ ಮಾತ್ರ ಬೇರು ಹಿಡಿದು ಮೇಲೆ ಬನ್ನಿ, ನಿಮಗೆ ಸಾಧ್ಯ ಇದೆ, ಇದೇನು ದೊಡ್ಡ ಗುಂಡಿ ಅಲ್ಲ, ಜೀವನದಲ್ಲಿ ನೀವು ಮಾಡೋಕೆ ಬೇಕಾದಷ್ಟಿದೆ. ಬನ್ನಿ ಬೇಗ ಎಂದು ನಿಧಾನಕ್ಕೆ ಹೇಳುತ್ತಿತ್ತು. ಈ ಜಗಳದಲ್ಲಿ ಆ ಕಪ್ಪೆ ದನಿ ಸ್ವಲ್ಪ ಕಮ್ಮಿಯೇ ಇತ್ತು.

ಕೆಳಗಿದ್ದ ಕಪ್ಪೆಯೊಂದು ಬರೀ ಸಣ್ಣದನಿಯ ಕಪ್ಪೆ ಮಾತನ್ನು ಕೇಳಿಸಿಕೊಳ್ಳುತ್ತಿತ್ತು. ಸಮಾಧಾನದಿಂದ, ತಾಳ್ಮೆಯಿಂದ ಮೇಲೆ ಬಂದೇಬಿಟ್ಟಿತು. ಜಗಳವಾಡುತ್ತಿದ್ದ ಉಳಿದ ಕಪ್ಪೆಗಳಿಗೆ ಈ ಕಪ್ಪೆ ಮೇಲೆ ಬಂದಿದ್ದೂ ಸಹ ಕಾಣಲಿಲ್ಲ, ಅವು ಬೇಡದ್ದು ಮಾತನಾಡುತ್ತಲೇ ಇದ್ದವು. ಈ ಕಪ್ಪೆಗಳ ಜಗಳದ ಮಾತು ಕೇಳಿದ ಉಳಿದ ಕಪ್ಪೆಗಳು ಗುಂಡಿಯಲ್ಲೇ ಉಳಿದುಕೊಂಡವು!

ಏನು ಅರ್ಥ ಆಯ್ತು? ಜೀವನದಲ್ಲಿ ಗುಂಡಿಗೆ ಬೀಳೋದು ಸಾಮಾನ್ಯ. ಆದರೆ ಜೀವನವೇ ಮುಗಿದಿಲ್ಲ. ಮೇಲೆ ಏಳೋಕೂ ಸಾಧ್ಯವಿದೆ. ತಾಳ್ಮೆ ಮತ್ತು ಪರಿಶ್ರಮ ಬೇಕಷ್ಟೆ. ಕೆಲವೊಮ್ಮೆ ಕಷ್ಟದಲ್ಲಿ ಇದ್ದಾಗಲೇ ಜನರ ನಿಜವಾದ ಬಣ್ಣ ಕಾಣುತ್ತದೆ ಎನ್ನುವುದನ್ನೂ ನಾವು ತಿಳಿಯಬಹುದು. ಇನ್ನು ಸಕಾರಾತ್ಮಕ ಆಲೋಚನೆಗಳಿಗೆ ಕಿವಿಕೊಟ್ಟರೆ ಜೀವನ ಸುರಾಗ ಎನ್ನಬಹುದು. ನೀವು ಬಿದ್ದು ಎದ್ದ ಕಪ್ಪೆಯಾಗುತ್ತೀರೋ, ಬಿದ್ದು ಸತ್ತ ಕಪ್ಪೆಯಾಗುತ್ತೀರೋ ಆಲೋಚಿಸಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!