ಹೊಸದಿಗಂತ ವರದಿ, ಮಂಗಳೂರು:
ಮಳೆಗಾಲದ ಸಮಯದಲ್ಲಿ ಕುಮಾರಧಾರ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಸ್ಥಾನಘಟ್ಟದಲ್ಲಿ ನೀರಿನ ಸೆಳೆತ ಜಾಸ್ತಿ ಇರುವುದರಿಂದ ಸಂಭಾವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಕುಮಾರಧಾರ ನದಿಯಲ್ಲಿ ಭಕ್ತರಿಗೆ ಸ್ನಾನ ಮಾಡಲು ಜಿಲ್ಲಾಡಳಿತದಿಂದ ನಿರ್ಬಂಧ ವಿದಿಸಿತ್ತು. ಇದೀಗ ನೀರಿನ ಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ನಿರ್ಬಂಧ ತೆರವುಗೊಳಿಸಿ ಭಕ್ತರಿಗೆ ಪುಣ್ಯ ಸ್ನಾನ ಮಾಡಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ಕುಮಾರಧಾರ ನದಿಯು ಪ್ರವಾಹದಿಂದ ಹರಿಯುವಾಗ ಸಂಭಾವ್ಯ ಅಪಾಯಗಳು ಸಂಭವಿಸಬಾರದೆಂದು ಪುಣ್ಯ ಸ್ನಾನಕ್ಕೆ ಅವಕಾಶ ನಿರ್ಬಂಧಿಸಲಾಗಿತ್ತು.ಇದೀಗ ಮಳೆಯ ಪ್ರಮಾಣ ಕಡಿಮೆಯಾಗಿ ನೀರಿನ ಮಟ್ಟ ಕುಸಿತಗೊಂಡ ಕಾರಣ ಭಕ್ತರಿಗೆ ನದಿಗೆ ಇಳಿದು ಸ್ನಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ.ಭಕ್ತರು ಇದೀಗ ಪುಣ್ಯ ನದಿ ಕುಮಾರಧಾರದಲ್ಲಿ ನದಿಗೆ ಇಳಿದು ಪುಣ್ಯ ಸ್ನಾನ ಮಾಡುತ್ತಿದ್ದಾರೆ.
ರಕ್ಷಣೆಗಾಗಿ ಕುಮಾರಧಾರದಲ್ಲಿ ಗೃಹ ರಕ್ಷಕ ಸಿಬ್ಬಂದಿ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಇವರು ದಿನದ ೨೪ ಗಂಟೆ ವಿವಿಧ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.ಈ ಹಿಂದೆ ಭಕ್ತರಿಗೆ ನದಿಗೆ ಇಳಿಯದೆ ತೀರ್ಥ ಸ್ನಾನ ಮಾಡಲು ಅನುಕೂಲವಾಗುವಂತೆ ಶ್ರೀ ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ನದಿ ತಟದಲ್ಲಿ ನೀರಿನ ಡ್ರಮ್ಮುಗಳನ್ನು ಇರಿಸಿ ಭಕ್ತರಿಗೆ ತೀರ್ಥಸ್ನಾನ ಮಾಡಲು ಅವಕಾಶ ಕಲ್ಪಿಸಿದ್ದರು.ಬಳಿಕ ಸ್ನಾನಘಟ್ಟದಲ್ಲಿ ಶವರ್ ವ್ಯವಸ್ಥೆ ಅಳವಡಿಸಿ ಪುಣ್ಯಸ್ನಾನ ನೆರವೇರಿಸಲು ವಿಶೇಷ ವ್ಯವಸ್ಥೆ ಮಾಡಿಕೊಟ್ಟಿದ್ದರು.