August 1, 2026
Saturday, August 1, 2026
spot_img

ಐದು ಭಾಷೆಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದ ಖ್ಯಾತ ಗಾಯಕಿ ಜಮುನಾ ರಾಣಿ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಸಾವಿರಾರು ಮಧುರ ಗೀತೆಗಳನ್ನು ಹಾಡಿ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದ ಹಿರಿಯ ಹಿನ್ನೆಲೆ ಗಾಯಕಿ ಕೆ. ಜಮುನಾ ರಾಣಿ (88) ಶುಕ್ರವಾರ (ಜುಲೈ 31) ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ವೃದ್ಧಾಶ್ರಮವೊಂದರಲ್ಲಿ ಶುಕ್ರವಾರ ಬೆಳಗಿನ ಜಾವ ಸುಮಾರು 5:30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಸಂಗೀತ ಪ್ರೇಮಿಗಳು ತೀವ್ರ ಕರಳು ಕರಗುವ ಸಂತಾಪ ಸೂಚಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಹಿನ್ನೆಲೆ ಗಾಯನ ಪ್ರವೇಶ:

ಮೂಲತಃ ಆಂಧ್ರಪ್ರದೇಶದವರಾದ ಜಮುನಾ ರಾಣಿ ಬಾಲ್ಯದಿಂದಲೇ ಸಂಗೀತದ ಕಡೆಗೆ ಅಪಾರ ಆಸಕ್ತಿ ಹೊಂದಿದ್ದರು. ಕೇವಲ 7 ವರ್ಷದ ಬಾಲಕಿಯಾಗಿದ್ದಾಗಲೇ ತೆಲುಗಿನ ‘ತ್ಯಾಗಯ್ಯ’ (1946) ಚಿತ್ರದ ಮೂಲಕ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದರು. ಬಾಲ್ಯದಲ್ಲೇ ಇವರ ಧ್ವನಿಯಲ್ಲಿದ್ದ ಮಧುರತೆ ಮತ್ತು ಅದ್ಭುತ ಸ್ಪಷ್ಟತೆ ದಕ್ಷಿಣ ಭಾರತದ ಪ್ರಮುಖ ಸಂಗೀತ ನಿರ್ದೇಶಕರ ಗಮನ ಸೆಳೆಯಿತು.

ಇದನ್ನೂ ಓದಿ:

ಕನ್ನಡ ಸೇರಿದಂತೆ 6,000ಕ್ಕೂ ಹೆಚ್ಚು ಗೀತೆಗಳು:

ತಮ್ಮ ಐದು ದಶಕಗಳ ಸುದೀರ್ಘ ಸಂಗೀತ ಪಯಣದಲ್ಲಿ ಜಮುನಾ ರಾಣಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಸಿಂಹಳ ಭಾಷೆಗಳಲ್ಲಿ ಒಟ್ಟು 6,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಸುವರ್ಣ ಯುಗದ ಪ್ರಮುಖ ಚಿತ್ರಗಳಿಗೆ ಧ್ವನಿಯಾಗಿದ್ದ ಇವರ ಗಾಯನ ಶೈಲಿ ವಿಶಿಷ್ಟವಾಗಿತ್ತು. ಕಾಲ ಬದಲಾದರೂ ದಕ್ಷಿಣ ಭಾರತದ ಚಿತ್ರಸಂಗೀತ ಲೋಕಕ್ಕೆ ಇವರು ನೀಡಿದ ಕೊಡುಗೆ ಚಿರಸ್ಮರಣೀಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !