ಹೊಸದಿಗಂತ ಚಿತ್ರದುರ್ಗ:
ಪ್ರಸ್ತುತ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲೆಡೆ ಕ್ರಿಕೆಟ್‌ನದ್ದೇ ಹವಾ. ಕಳೆದ ಕೆಲವು ದಿನಗಳಿಂದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ನಿರಂತ ಗೆಲುವು ದಾಖಲಿಸುತ್ತಿದೆ. ಈ ಖುಷಿಯಲ್ಲಿ ಅಭಿಮಾನಿಗಳು ಮೇಕೆ ಬಲಿ ಕೊಟ್ಟು ಸಂಭ್ರಮಾಚರಣೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಈ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಈಗ ಕಾನೂನು ಕ್ರಮ ಎದುರಿಸುವಂತಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ ಮಾರಮ್ಮನಹಳ್ಳಿ ಗ್ರಾಮದ ಸಣ್ಣ ಪಾಲಯ್ಯ (22), ಜಯಣ್ಣ (23), ತಿಪ್ಪೇಸ್ವಾಮಿ (28) ಮೂರು ಜನ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಐಪಿಎಲ್‌ನಲ್ಲಿ ಯುವಕರು ತಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ಮರೆತು ಹೋಗಿದ್ದಾರೆ. ಅಭಿಮಾನವೆಂಬುವುದು ಅತಿರೇಕವಾಗಿ ಹಲವು ಅವಾಂತರಗಳು ಸೃಷ್ಟಿ ಮಾಡುತ್ತಿದ್ದಾರೆ. ಮೊನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಾದ ಹಿನ್ನೆಲೆಯಲ್ಲಿ ತಮ್ಮ ಅಭಿಮಾನ ತೋರಿಸಿಕೊಳ್ಳುವ ಭರದಲ್ಲಿ ಯುವಕರು ಹೊಣೆಗೇಡಿ ಕೆಲಸ ಮಾಡಿದ್ದಾರೆ.
ಮಾರಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ೧೨.೩೦ಕ್ಕೆ ವಿರಾಟ್ ಕೊಹ್ಲಿ ಪೋಸ್ಟರ್ ಮುಂದೆ ಯುವಕರ ಗುಂಪೊಂದು ಮೇಕೆಯನ್ನು ಬಲಿ ಕೊಟ್ಟು ರಕ್ತ್ತಾಭಿಷೇಕ ಮಾಡಿದ್ದಾರೆ. ಅಲ್ಲದೇ ತಾವು ಮಾಡಿದ ಘನ ಕಾರ್ಯವನ್ನು ಇನ್‌ಸ್ಟ್ಟಾಗ್ರಾಮ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಮಾಹಿತಿ ಖಚಿತ ಪಡಿಸಿಕೊಂಡ ಮೊಳಕಾಲ್ಮುರು ಪೊಲೀಸ್ ಠಾಣೆ ಪಿಎಸ್‌ಐ ಪಾಂಡುರಂಗಪ್ಪ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಆರ್‌ಸಿಬಿ ಅಭಿಮಾನಿಗಳು ಸೇರಿಕೊಂಡು ಗೆಲುವಿನ ವಿಜಯೋತ್ಸವಕ್ಕೆ ಮೇಕೆಯನ್ನು ಬಲಿ ಕೊಟ್ಟಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಪ್ರಾಣಿ ಹಿಂಸೆ ನಿಷೇಧ ಕುರಿತು ಕಾನೂನು ಇದ್ದರೂ ಪ್ರಾಣಿ ಹಿಂಸೆ ಮಾಡಿ ಮೊಬೈಲ್‌ನಲ್ಲಿ ವಿಡಿಯೋ ಹರಿಬಿಟ್ಟಿರುವುದು ಕನೂನು ಬಾಹಿರ ಕ್ರಮವಾಗಿದೆ. ಹಾಗಾಗಿ ಪೊಲೀಸರು, ಮೂರು ಜನ ಆರ್‌ಸಿಬಿ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.