ಕಂದಾಯ ಇಲಾಖೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮಡಿಕೇರಿಯಲ್ಲಿ ರೈತ ಸಮಾವೇಶ: ರಾಬಿನ್ ದೇವಯ್ಯ

ಹೊಸದಿಗಂತ ವರದಿ, ಮಡಿಕೇರಿ:
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೇ 12 ರಂದು ಕಂದಾಯ ಸಚಿವರ ನೇತೃತ್ವದಲ್ಲಿ ರೈತ‌ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅದ್ಯಕ್ಷ ರಾಬಿನ್ ದೇವಯ್ಯ ಅವರು ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರವನ್ನೇ ಜನರ ಬಳಿಗೆ ಕರೆತರುವ ಕಾರ್ಯವನ್ನು ಬಿಜೆಪಿ ಮಾಡುತ್ತಿದ್ದು, ಇದರ ಮೊದಲ ಹಂತವಾಗಿ ಕಂದಾಯ ಸಚಿವರನ್ನು ಆಹ್ವಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಇಲಾಖೆಗಳ ಸಚಿವರನ್ನೂ ಆಹ್ವಾನಿಸಲಾಗುವುದು ಎಂದು ವಿವರಿಸಿದರು.
ಮೇ 12ರ ಪೂರ್ವಾಹ್ನ 11 ಗಂಟೆಗೆ ನಗರದ ಕ್ರಿಸ್ಟಲ್‌ ಹಾಲ್ ಸಭಾಂಗಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕಂದಾಯ ಸಚಿವ ಆರ್. ಅಶೋಕ್,ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುಜಾಕುಶಾಲಪ್ಪ ಅವರುಗಳು ಭಾಗವಹಿಸಲಿದ್ದು, ಮುಖ್ಯವಾಗಿ ಸರ್ಕಾರಿ ( ಪೈಸಾರಿ) ಜಮೀನು ಒತ್ತುವರಿ ಮಾಡಿ ಕೃಷಿ ಮಾಡಿಕೊಂಡಿರುವವರನ್ನು ಒಕ್ಕಲೆಬ್ಬಿಸದೆ, ಅವರಿಗೆ ಅದೇ ಜಾಗವನ್ನು ನಿಗದಿತ ದರದಲ್ಲಿ 30 ವರ್ಷಗಳ ಕಾಲ ಗುತ್ತಿಗೆ ಕೊಡುವಂತೆ ಮತ್ತು ಕೊಡಗಿನಲ್ಲಿ ಬಹಳ ದಿನಗಳಿಂದ ಕಾಡುತ್ತಿರುವಪೌತಿ ಖಾತೆ ಸಮಸ್ಯೆಗೆ ಸಲಹೆ ಹಾಗೂ ಇತ್ಯರ್ಥ ಮತ್ತು ಕಂದಾಯ ಇಲಾಖೆಯ ಇತರ ಸಮಸ್ಯೆಗಳ ಬಗ್ಗೆ ರೈತರಿಂದ ಸಲಹೆ ಪಡೆಯಲಾಗುವುದು ಎಂದು ರಾಬಿನ್ ದೇವಯ್ಯ ತಿಳಿಸಿದರು.
ಸಣ್ಣ ಹಿಡುವಳಿದಾರರಿಗೆ ಪ್ರಯೋಜನ:
ಗೋಷ್ಠಿಯಲ್ಲಿ ಹಾಜರಿದ್ಧ ರಾಜ್ಯ ಕೃಷಿ ಮೋರ್ಚಾ ಮುಖಂಡ ಡಾ. ನವೀನ್ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 12ಸಾವಿರ ಎಕರೆಯಷ್ಟು ಸರಕಾರಿ ಜಮೀನು ಒತ್ತುವರಿಯಾಗಿದ್ದು, ಇದನ್ನು ಲೀಸ್’ಗೆ ನೀಡುವುದರಿಂದ ಶೇ.80ರಷ್ಟು ಸಣ್ಣ ಹಿಡುವಳಿದಾರರಿಗೆ ಪ್ರಯೋಜನವಾಗಲಿದೆ ಎಂದು ನುಡಿದರು.
ಸರಕಾರಿ ಒತ್ತುವರಿ ಜಮೀನನ್ನು ಲೀಸ್’ಗೆ ನೀಡುವುದರಿಂದ ನಿವೇಶನ ರಹಿತರಿಗೆ ಜಮೀನಿನ ಕೊರತೆಯಾಗುವ ಆತಂಕ ಕೆಲವರಲ್ಲಿದೆ. ಆದರೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ದಿಸೆಯಲ್ಲಿ ಅರಣ್ಯ ಇಲಾಖೆಗೆ ನೀಡಲಾಗಿದ್ದ 9ಲಕ್ಷ ಹೆಕ್ಟೇರ್ ಸಿ ಮತ್ತು ಡಿ ವರ್ಗದ ಭೂಮಿಯ ಪೈಕಿ 6.5ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಾಸು‌ ಪಡೆಯಲಾಗುತ್ತಿದ್ದು, ಇದನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಸರಕಾರ ‌ಚಿಂತನೆ‌ ನಡೆಸಿದೆ ಎಂದು ವಿವರಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ಕಾಳಪ್ಪ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪೌತಿ ಖಾತೆ ಸಮಸ್ಯೆಯಿದ್ದು, ಇದರಿಂದಾಗಿ ಅನೇಕ ಕುಟುಂಬಗಳು ಸಾಲ ಸೇರಿದಂತೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದೀಗ ಈ‌ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮವಹಿಸಿದ್ದು, ಕೆಲವು ಗ್ರಾಮಗಳಲ್ಲಿ ಈಗಾಗಲೇ ಪಂಚಾಯತ್ ಮಟ್ಟದಲ್ಲಿ ಆಂದೋಲನ‌ ರೂಪದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ವಕ್ತಾರ ಮಹೇಶ್ ಜೈನಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!