ಹೊಸದಿಗಂತ ವರದಿ
– ಪರಶುರಾಮ ಶಿವಶರಣ, ವಿಜಯಪುರ
ನೀರು, ನೆರಳಿಲ್ಲದ ಬರದ ನಾಡಿನ ಗರಸು ಭೂಮಿಗೆ ದ್ರಾಕ್ಷಿ, ದಾಳಿಂಬೆ, ನಿಂಬೆ ಬೆಳೆ ರೈತರ ಪಾಲಿಗೆ ವರದಾನವಾಗಿದ್ದವು. ಸದ್ಯ ಈ ಸಾಲಿಗೆ ಹಿಪ್ಪು ನೇರಳೆಯೂ ಸೇರಿದ್ದು ಇದು ರೇಷ್ಮೆ ಗೂಡು ಉತ್ಪಾದನೆಗೆ ಜೀವ ಕಳೆ ತುಂಬಿದೆ.
ರೇಷ್ಮೆ ಕೃಷಿಯಲ್ಲಿ ತಿಂಗಳಿಗೆ ಲಕ್ಷ ರೂಪಾಯಿ ಸಂಪಾದಿಸಿ ವರ್ಷಕ್ಕೆ 12 ಲಕ್ಷ ರೂ.ಗಳನ್ನು ಸಂಪಾದಿಸಿ ಜಿಲ್ಲೆಯ ರೈತ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅವರೇ ಗುಂಡಪ್ಪ ಗುಡಲಮನಿ. ಮೂಲತಃ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು.
ಕಳೆದ 20 ವರ್ಷಗಳಿಂದ ಹಿಪ್ಪು ನೇರಳೆ ಬೆಳೆಯನ್ನು ಹೇರಳವಾಗಿ ಬೆಳೆದು, ಡಬ್ಬಲ್ ಹೈಬ್ರಿಡ್ ಬಿಳಿ ರೇಷ್ಮೆ ಗೂಡು ಉತ್ಪಾದಿಸಿ, ಅಧಿಕ ಲಾಭ ಪಡೆಯುತ್ತಿದ್ದಾರೆ. ತಮಗಿರುವ 3 ಎಕರೆ ಜಮೀನಿನಲ್ಲಿ ಕೊಳವೆ ಬಾವಿ ತೋಡಿಸಿ, ಹನಿ ನೀರಾವರಿ ಪದ್ಧತಿ ಮೂಲಕ ಹಿಪ್ಪು ನೇರಳೆ ಬೆಳೆದು ಬಿಳಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.
ರೇಷ್ಮೆ ಬೆಳೆ ಎಂಬುದು ದೂರದ ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಇತರೆ ಭಾಗದಲ್ಲಿ ಬೆಳೆಯುವ ವಾಣಿಜ್ಯ ಮಾದರಿಯ ಕೃಷಿಯಾಗಿದೆ ಎಂಬ ಮಾತಿತ್ತು. ಈಗ ಅದು ಸುಳ್ಳಾಗುವಂತೆ ಮನಗೂಳಿಯ ಗುಡಲಮನಿ ರೇಷ್ಮೆ ಗೂಡು ತಯಾರಿಸುವ ಬೆಚ್ಚಿನಗಿನ ಮನೆ ನಿರ್ಮಿಸಿದ್ದಾರೆ.
ಅದರಲ್ಲಿ ರೇಷ್ಮೆ ಹುಳುವನ್ನು ಶಾಸ್ತ್ರಿಯ ಪದ್ಧತಿ ಮೂಲಕ ಬೆಳೆಸಿ, ಚಂದ್ರಿಕೆಯಲ್ಲಿ ರೇಷ್ಮೆ ಗೂಡು ನಿರ್ಮಾಣಗೊಳ್ಳುವಂತೆ ಮಾಡುವ ಕೃಷಿ ಪದ್ಧತಿ ಕರಗತ ಮಾಡಿಕೊಂಡಿದ್ದಾರೆ.
ರೇಷ್ಮೆ ಗೂಡು ಉತ್ಪಾದಕರಲ್ಲಿ ಒಂದು ಮಾತಿದೆ. ನನಗೆ ಇರಲು, ಹುಳುಮನಿ ಕೊಟ್ಟರೆ, ನಿನಗೆ ಇರಲು ಅರಮನಿ ಮಾಡಿಕೊಡುವೆ ಎಂಬುದು ಜನಜನಿತವಾಗಿದೆ. ಈಗ ಅದು ಗುಡಲಮನಿಯವರ ಕೃಷಿ ಬದುಕಿನಲ್ಲಿ ನಿಜವೆಂದು ಸಾಬೀತಾಗಿದೆ.
ಸ್ವಂತ ಚಾಕಿ ಪದ್ಧತಿ:
ರೈತ ಕುಡಲಮನಿ ಬೆಂಗಳೂರು, ತುಮಕೂರಿನಿಂದ ರೇಷ್ಮೆ ಮೊಟ್ಟೆ ತಂದು ಸ್ವಂತ ಚಾಕಿ ಮಾಡಿ ರೇಷ್ಮೆ ಗೂಡು ಉತ್ಪಾದಿಸುತ್ತಾರೆ. 100 ರೇಷ್ಮೆ ಮೊಟ್ಟೆಗೆ 1000 ರೂ.ಗಳಂತೆ ಖರೀದಿಸಿ ತಂದು, ರೇಷ್ಮೆ ಹುಳು ಗೂಡು ಕಟ್ಟುವಂತೆ ಬೆಳೆಸಿ, ಕೆಜಿ ರೇಷ್ಮೆಗೆ 500 ರೂ.ಗಳಂತೆ ಮಾರಾಟ ಮಾಡಲಾಗುತ್ತದೆ.
28 ದಿನಕ್ಕೆ ಗೂಡು ತಯಾರಿ:
ರೇಷ್ಮೆ ಹುಳುವಿಗೆ ಪ್ರಾಥಮಿಕ ಹಂತದಲ್ಲಿ ಹಿಪ್ಪು ನೇರಳೆ ಸೊಪ್ಪನ್ನು ಈರುಳ್ಳಿಯಂತೆ ಕತ್ತರಿಸಿ ಹಾಕಲಾಗುತ್ತದೆ. ಬಳಿಕ ಎರಡನೇ ಹಂತದಲ್ಲಿ ಹಿಪ್ಪು ನೇರಳೆ ಗಿಡದ ರೆಂಬೆ ಕತ್ತರಿಸಿದ ಸೊಪ್ಪನ್ನು ಹಾಕಲಾಗುತ್ತದೆ. ರೇಷ್ಮೆ ಹುಳುಗಳು ಹಿಪ್ಪು ನೇರಳೆ ಸೊಪ್ಪನ್ನು ತಿಂದು, 28 ದಿನಗಳಲ್ಲಿ ಗೂಡು ತಯಾರಿ ಮಾಡುತ್ತವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ