Monday, March 4, 2024

ಸಿಎಂಗೆ ರೈತರ ಸೆಡ್ಡು: ರೂ.2100 ಚೆಕ್‌ ವಾಪಸ್!

ಹೊಸದಿಗಂತ ವರದಿ, ಹಾವೇರಿ:

ರೈತರ ಸಂಕಷ್ಟಗಳಿಗೆ ದನಿಯಾಗಬೇಕಾಗಿದ್ದ ಸಿಎಂ ಮತ್ತು ಸಚಿವರು ಅನ್ನದಾತನ ನೆರವಿಗೆ ಧಾವಿಸುತ್ತಿಲ್ಲ. ಇದೀಗ ರೈತರನ್ನು ಅವಮಾನಿಸುವ ರೀತಿಯಲ್ಲಿ ರೂ.೨೦೦೦ಗಳನ್ನು ರೈತರ ಖಾತೆಗೆ ಜಮಾ ಮಾಡುತ್ತಿದ್ದು, ಅದಕ್ಕೆ ರೂ.೧೦೦ಸೇರಿಸಿ, ರೈತರೇ ಸ್ವತಃ ಸಿಎಂಗೆ ರೂ.೨೧೦೦ಗಳ ಚೆಕ್‌ನ್ನು ನೀಡುವುದಾಗಿ ರೈತರು ಘೋಷಣೆ ಮಾಡಿದರು.

ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಳೆದ ನಾಲ್ಕು ದಿನಗಳಿಂದ ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಈ ಮೂಲಕ ಸಿಎಂ ಮತ್ತು ಮಂತ್ರಿಮಂಡಲದ ನಡೆಗೆ ಸೆಡ್ಡು ಹೊಡೆದಿದ್ದಾರೆ.

ಈಗಾಗಲೇ ಬರಘೋಷಣೆ ಮಾಡಿದ ರಾಜ್ಯ ಸರ್ಕಾರ ಎರಡು ತಿಂಗಳೇ ಗತಿಸಿದರೂ ಬೆಳೆ ಪರಿಹಾರ ಕಾಮಗಾರಿಯನ್ನು ಕೈಗೊಂಡಿಲ್ಲ. ಈ ಬಗ್ಗೆ ಕನಿಷ್ಟ ಬರ ಪರಿಹಾರ ಎಷ್ಟು ನೀಡಲಾಗುವುದು ಎಂಬುದನ್ನೂ ಸಹ ಸ್ಪಷ್ಟಪಡಿಸದೇ ರೈತರನ್ನು ಕತ್ತಲೆಯಲ್ಲಿಡುವ ಪ್ರಯತ್ನ ನಡೆಸಿದೆ. ಸರ್ಕಾರದ ಈ ನಡೆ ಖಂಡನೀಯವಾಗಿದೆ. ಯಾವುದೇ ಸ್ಪಷ್ಟತೆ ಇಲ್ಲದೇ ಗ್ಯಾರಂಟಿ ಹೆಸರಲ್ಲಿ ನಾಲ್ಕಾರು ದಿನ ಕಳೆದು, ಈಗ ಲೋಕಸಭಾ ಚುನಾವಣೆ ನೆಪದಲ್ಲಿ ದಿನಗಳನ್ನು ದೂಡುತ್ತಿದೆ ಎಂದು ರೈತರ ಮುಖಂಡರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಈಗಾಗಲೇ ರೈತ ಹೋರಾಟದ ಬಿಸಿ ಸರ್ಕಾರಕ್ಕೆ ತಟ್ಟಿದ ಹಿನ್ನೆಲೆಯಲ್ಲಿ ರೈತರ ಖಾತೆಗೆ ತಲಾ ರೂ.೨೦೦೦ಜಮಾ ಮಾಡುತ್ತಿದ್ದಾರೆ. ಆದರೆ ರೈತರಿಗೆ ಅಂಥ ದುರ್ಗತಿ ಬಂದಿಲ್ಲ. ನಿಮ್ಮ ಪುಡಿಗಾಸಿನ ಹಣಕ್ಕೆ ನಾವು ಇನ್ನೂ ರೂ.೧೦೦ಸೇರಿಸಿ ಕರ್ನಾಟಕ ಸಿಎಂ ಹೆಸರಿಗೆ ರೂ.೨೧೦೦ಗಳ ಹಣವನ್ನು ಮರಳಿಸುತ್ತಿದ್ದೇವೆ ಎಂದು ಚೆಕ್ ಸಾಮೂಹಿಕವಾಗಿ ಚೆಕ್ ಪ್ರದರ್ಶಿಸುವ ಮೂಲಕ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ ಹಾಗೂ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ನಾಳೆ ಬೆಳಗ್ಗೆ ರಾಷ್ಟ್ರಧ್ವಜಾರೋಹಣ. ಅದಕ್ಕೂ ಮುನ್ನ ನಮ್ಮೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆಗೆ ಬರಲಿ. ಇದಕ್ಕೆ ಮುಕ್ತ ಸ್ವಾಗತವಿದೆ. ತಪ್ಪಿದಲ್ಲಿ ವಿಭಿನ್ನ ಹೋರಾಟ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಈ ವೇಳೆ ಪ್ರತಿಭಟನೆಯಲ್ಲಿ ರೈತ ಮುಖಂಡ ಮಾಲತೇಶ ಪೂಜಾರ, ದಿಳ್ಳೆಪ್ಪ ಮಣ್ಣೂರ, ಸುರೇಶ ಚಲವಾದಿ, ಗಂಗಣ್ಣ ಎಲಿ, ಶಿವಯೋಗಿ ಹೊಸಗೌಡ್ರ ಸೇರಿದಂತೆ ರಾಣೆಬೆನ್ನೂರು ತಾಲೂಕಿನ ನೂರಾರು ರೈತರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!