ಬ್ಯಾಡಗಿ ಮೆಣಸಿನಕಾಯಿ ದರ ಕುಸಿತಕ್ಕೆ ರೊಚ್ಚಿಗೆದ್ದ ರೈತರು: ಮಾರುಕಟ್ಟೆ, ಅಗ್ನಿಶಾಮಕ ವಾಹನಕ್ಕೆ ಬೆಂಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದರ ಕುಸಿತ ವಿರೋಧಿಸಿ ರೈತರು ಮಾಡುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.

ಬ್ಯಾಡಗಿ ಒಣ ಮೆಣಸಿನಕಾಯಿ ಮಾರುಕಟ್ಟೆ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ದಿಢೀರನೆ 8,000 ರೂ. ಕುಸಿತವಾದ್ದರಿಂದ (20 ಸಾವಿರ ರೂ.ನಿಂದ 12 ಸಾವಿರ ರೂ.ಗೆ ಇಳಿಕೆ) ರೈತರು ಆಕ್ರೋಶ ವ್ಯಕ್ತಪಡಿಸಿ ಎಪಿಎಂಸಿ ಕಟ್ಟಡ ಹಾಗೂ ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದರ ಬೆನ್ನಲ್ಲಿಯೇ ಸ್ಥಳಕ್ಕಾಗಮಿಸಿದ ಪೊಲೀಸರು ಕೈಗೆ ಸಿಕ್ಕ ರೈತರನ್ನೆಲ್ಲಾ ವಶಕ್ಕೆ ಪಡೆಯುತ್ತಿದ್ದಾರೆ.

ಆಕ್ರೋಶಗೊಂಡ ರೈತರು ಎಪಿಎಂಸಿಗೆ ಸಂಬಂಧಿಸಿದ ಮೂರು ಕಾರುಗಳು, ಒಂದು ಅಗ್ನಿಶಾಮಕ ದಳದ ವಾಹನ ಹಾಗೂ 10 ಬೈಕ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯ ಆಸ್ತಿ-ಪಾಸ್ತಿಗಳಿಗೆ ಹಾನಿಯಾದ ಬೆನ್ನಲ್ಲಿಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಇದಕ್ಕೆ ಬಗ್ಗದೇ ಪೊಲೀಸರ ವಿರುದ್ಧವೇ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರೈತರ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಜಿಲ್ಲಾಕೇಂದ್ರ ಹಾವೇರಿ ಹಾಗೂ ಇತರೆ ತಾಲೂಕುಗಳಿಂದ ಹೆಚ್ಚಿವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ನಂತರ, ಆಕ್ರೋಶಭರಿತ ಪರಿಸ್ಥಿತಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರೈತರ ಮೇಲೆ ಲಾಠಿ ಬೀಸಿದ್ದಾರೆ. ಈ ವೇಳೆ ರೈತರು ಚದುರಿ ಓಡಿ ಹೋಗಿದ್ದಾರೆ. ಆಗ, ಕೈಗೆ ಸಿಕ್ಕ ರೈತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!