Friday, September 22, 2023

Latest Posts

ತುಂಗಭದ್ರಾ ಜಲಾಶಯದ ಉಪ ಕಾಲುವೆಗಳಿಗೆ ನೀರು ಹರಿಸುವಂತೆ ರೈತ ಸಂಘ ಒತ್ತಾಯ

ಹೊಸದಿಗಂತ ವರದಿ ಬಳ್ಳಾರಿ:

ತುಂಗಭದ್ರಾ ಜಲಾಶಯದ ಎಚ್ಎಲ್ ಸಿ ಹಾಗೂ ಎಲ್ ಎಲ್ ಸಿ ಕಾಲುವೆಯ ಉಪ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಕಳೆದ ಜು.28 ರಿಂದ ನೆರೆಯ ಆಂದ್ರಪ್ರದೇಶದ ರೈತರಿಗೆ ಎಚ್ ಎಲ್ ಸಿ ಹಾಗೂ ಎಲ್ ಎಲ್ ಸಿ ಮುಖ್ಯ ಕಾಲುವೆಗಳಿಗೆ ನೀರು ಹರಿಸಲಾಗಿದೆ. ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸಿದ್ದರೂ ಜಲಾಶಯದ ಉಪ ಕಾಲುವೆಗಳಿಗೆ ಇಲ್ಲಿವರೆಗೂ ನೀರು ಹರಿಸದಿರುವುದು ಬಹುದೊಡ್ಡ ದುರಂತ.

ಜಲಾಶಯದ ಎಲ್ ಎಲ್ ಸಿ ಹಾಗೂ ಎಚ್ ಎಲ್ ಸಿ ಮುಖ್ಯ ಕಾಲುವೆಗಳ ಮೂಲಕ ಉಪ ಕಾಲುವೆಗಳಿಗೆ ನೀರು ಹರಿಸಿದರೇ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ನೀರು ತಲುಪಲಿದ್ದು, ಕುಡಿವ ನೀರಿನ ಬವಣೆ ತಪ್ಪಲಿದೆ. ಸಮರ್ಪಕ ಮಳೆ ಕೊರತೆಯಿಂದ ಕೆರೆಗಳು ಬತ್ತಿವೆ, ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತುಂಗಭದ್ರಾ ರೈತ ಸಂಘದ ಸಂಸ್ಥಾಪಕ ಅದ್ಯಕ್ಷ ದರೂರು ಪುರುಷೋತ್ತಮ ಗೌಡ ಅವರು ಮಾತನಾಡಿ, ತುಂಗಭದ್ರಾ ಜಲಾಶಯದ ಮುಖ್ಯ ಕಾಲುವೆಗಳ ಮೂಲಕ ಉಪ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು, ಪ್ರಾದೇಶಿಕ ಆಯುಕ್ತರು ಕಲಬುರ್ಗಿ ವಿಭಾಗ, ತುಂಗಭದ್ರಾ ಜಲಾಶಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮುನಿರಾಬಾದ್ ಅವರು ಕೂಡಲೇ ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಎಚ್ ಎಲ್ ಸಿ ಹಾಗೂ ಎಲ್ ಎಲ್ ಸಿ ಮುಖ್ಯ ಕಾಲುವೆಗಳ ಮೂಲಕ ಉಪ ಕಾಲುವೆಗಳಿಗೆ ಕುಡಿವ ನೀರು ಹರಿಸಲು ಮುಂದಾಗಬೇಕು, ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಇದಕ್ಕೂ ಮುನ್ನ ಡಿಸಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಟಿ.ರಂಜಾನಗ ಸಾಬ್, ಕೊಂಚಗೇರಿ ಮಲ್ಲಪ್ಪ, ಶ್ರೀಧರಗಡ್ಡೆ ವೀರನಗೌಡ, ಕುಡುತಿನಿ ಪಂಪಾಪತಿ, ಕೃಷ್ಣಾನಗರ ಕ್ಯಾಂಪ್ ಶಿವಯ್ಯ, ಬಸವರಾಜ್ ಸ್ವಾಮೀ ಎತ್ತಿನ ಬೂದಿಹಾಳ್, ಎಂ.ವೀರಭದ್ರ ನಾಯಕ್, ಮುಷ್ಟಗಟ್ಟೆ ಭೀಮನಗೌಡ, ದೇವಸಮುದ್ರ ನಾಗೇಂದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!