June 9, 2026
Tuesday, June 9, 2026
spot_img

ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ರೈತ ಸಂಘದ ಪ್ರತಿಭಟನೆ

ಹೊಸದಿಗಂತ ವರದಿ ಚಿತ್ರದುರ್ಗ:

ವಿದ್ಯುತ್ ವಿತರಣಾ ಕಂಪನಿಗಳನ್ನು ಟಾಟಾ ಪವರ್ ಕಂಪನಿಗಳಿಗೆ ನೀಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ|| ವಾಸುದೇವ ಮೇಟಿ ಬಣ) ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯವರೆಗೂ ಪಾದಯಾತ್ರೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮಸ್ಕಾಂ ವಿದ್ಯುತ್ ಕಂಪನಿಗಳ 19 ಜಿಲ್ಲೆಗಳ ವಿದ್ಯುತ್ ವಿತರಣಾ ಕಂಪನಿಗಳನ್ನು ವ್ಯವಸ್ಥಿತವಾಗಿ ಖಾಸಗಿ ಕಂಪನಿಯವರಿಗೆ ವಹಿಸುತ್ತಿರುವುದನ್ನು ರೈತ ಸಂಘ ವಿರೋಧಿಸುತ್ತದೆ. ಸಾವಿರಾರು ಕೋಟಿ ಮೌಲ್ಯದ ವಿತರಣಾ ಕಂಪನಿಗಳು, ಉಪಕೇಂದ್ರಗಳು, ಯಂತ್ರೋಪಕರಣ ಬೃಹತ್ ಸೌಕರ್ಯ ಹೊಂದಿರುವ ಸಾರ್ವಜನಿಕ ಆಸ್ತಿ ಆಗಿದ್ದು, ಈಗಿರುವಾಗ ಕಂಪನಿಗಳು ಮತ್ತು ನೌಕರರು ಸಮಪರ್ಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಆದರೂ ಖಾಸಗಿ ಕಂಪನಿಯವರಿಗೆ ವಹಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ರೈತರು, ಬಡವರ ಯೋಜನೆಗಳಿಗೆ ಧಕ್ಕೆ ಉಂಟಾಗುವ ಆತಂಕ

ಕೆಲವು ರಾಜ್ಯಗಳಲ್ಲಿ ಖಾಸಗಿ ಕಂಪನಿಗಳು ನಿರ್ವಹಣೆ ಮಾಡಲಾರದೆ ಅರ್ಧದಲ್ಲಿ ಬಿಟ್ಟು ಹೋಗಿದ್ದಾರೆ. ಸರ್ಕಾರ ವಿದ್ಯುತ್ ನಿರ್ವಹಣಾ ಕಂಪನಿಗಳು, ಖಾಸಗಿ ಸಂಸ್ಥೆಗಳಿಗೆ ನೀಡಿದರೆ ಖಾಸಗಿ ಕಂಪನಿಗಳು ಸ್ಮಾರ್ಟ್ ಮೀಟರ್‌ಗಳನ್ನು ಹಾಕಿ ಮೊಬೈಲ್ ಕಂಪನಿಗಳವರ ಪೋಸ್ಟ್ ಪೇಯ್ಡ್ ತರಹ ವ್ಯವಸ್ಥೆಗಳನ್ನು ಮಾಡುತ್ತಾರೆ. ರೈತರು ಬಡವರಿಗೆ ಕೂಲಿ ಕಾರ್ಮಿಕರಿಗೆ, ವೃದ್ದರಿಗೆ, ರೈತರ ಐಪಿ ಸೆಟ್‌ಗಳಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳನ್ನು ಇನ್ನು ಮುಂದೆ ರದ್ದಾಗಲಿದೆ.

ಇದನ್ನೂ ಓದಿ:

ನಿರ್ಧಾರ ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಈಗಿರುವ ಎಲ್ಲಾ ನೌಕರರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರ ವಿದ್ಯುತ್ ವಿತರಣೆ ಕಂಪನಿಗಳನ್ನು ಖಾಸಗಿಯವರಿಗೆ ವಹಿಸಬಾರದು ಇದನ್ನು ಮುಂದುವರಿಸಲು ಪ್ರಯತ್ನ ಪಟ್ಟರೆ ರಾಜ್ಯಾಧ್ಯಕ್ಷರಾದ ಡಾ.ವಾಸುದೇವ ಮೇಟಿ ನೇತೃತ್ವದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಂಭಾಗ ಮುಖ್ಯಮಂತ್ರಿಗಳ ಅಣಕು ಶವಯಾತ್ರೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ|| ವಾಸುದೇವ ಮೇಟಿ ಬಣದಿಂದ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ|| ವಾಸುದೇವ ಮೇಟಿ ಬಣ) ಜಿಲ್ಲಾಧಕ್ಷ ಈ.ಎನ್.ಲಕ್ಷ್ಮೀಕಾಂತ ಲಿಂಗಾವರಹಟ್ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮಹಿಳಾ ಜಿಲ್ಲಾಧ್ಯಕ್ಷರಾದ ಲೋಲಾಕ್ಷಮ್ಮ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರಾದ ಪವಿತ್ರ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷರಾದ ಮಂಜುಳ ಕೊಳಹಾಳ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ಜಯಲಕ್ಷ್ಮೀ, ಟಿ.ಟಿ.ಎಸ್. ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರಾದ ಎಸ್.ಕಾಂತರಾಜ್ ಮಾಳಪ್ಪನಹಟ್ಟಿ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ನಾಗರಾಜ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಹೇಮಾರೆಡ್ಡಿ ಕರೀಕೆರೆ, ಜಿಲ್ಲಾ ಕಾರ್ಯದರ್ಶಿ ಸಿ.ಓಂಕಾರಪ್ಪ ಸೇರಿದಂತೆ ಇತರೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !