ದೇಶದ ಹಸಿವು ನೀಗಿಸುವ ರೈತನ ಬೆಳೆಗೆ ಸಿಗುತ್ತಿಲ್ಲ ಉತ್ತಮ ಬೆಲೆ: ಡಾ. ವಿ.ಎಸ್. ಅಶೋಕ್

ಹೊಸದಿಗಂತ ವರದಿ ಮಂಡ್ಯ:

ದೇಶಕ್ಕೆ ಬೇಕಾದ ಆಹಾರೋತ್ಪಾದನೆಯನ್ನು ರೈತರು ಮಾಡುತ್ತಿದ್ದಾರೆ. ಆದರೆ, ಅವರ ಉತ್ಪಾದನೆಗೆ ತಕ್ಕಂತೆ ಉತ್ತಮ ದರ ಸಿಗುತ್ತಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ವಿ.ಎಸ್. ಅಶೋಕ್ ವಿಷಾದ ವ್ಯಕ್ತಪಡಿಸಿದರು.

ಬ್ಯಾಂಕ್ ಆಫ್ ಬರೋಡ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ರೈತ ಪಾಕ್ಷಿಕ (ಕಿಸಾನ್ ಪಕ್ವಾಡ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶದಲ್ಲಿ 35 ಕೋಟಿ ಜನಸಂಖ್ಯೆ ಇತ್ತು. ಆಗ ಆಹಾರ ಭದ್ರತೆ ಕಾಡುತ್ತಿತ್ತು. ಈಗ ದೇಶಕ್ಕೆ ಆಹಾರ ಭದ್ರತೆಯ ಕೊರತೆ ಇಲ್ಲ. ನಮ್ಮಲ್ಲಿ ಎರಡು ವರ್ಷಕ್ಕಾಗುವಷ್ಟು ರೈತರು ಆಹಾರ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಾರೆ. ಉತ್ಪನ್ನಗಳಿಗೆ ತಕ್ಕಂತೆ ಬೆಲೆ ದೊರಕಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.

ರೈತ ಮಹಿಳೆಯರ ಆರ್ಥಿಕ ಸುಧಾರಣೆಗಾಗಿ ಸರ್ಕಾರ 2ನೇ ನಿರ್ದೇಶನಾಲಯ ಜಾರಿಗೆ ತಂದಿದೆ. ಬೆಳೆದ ಕೃಷಿ ಉತ್ಪನ್ನಗಳನ್ನು ಜಮೀನಿನ ಬಳಿಯೇ ಮಾರಾಟ ಮಾಡಿದರೆ ರಾಗಿಗೆ ಕ್ವಿಂಟಾಲ್‌ಗೆ 2500 ರೂ. ಸಿಗುತ್ತದೆ. ಒಣಗಿಸಿ 6 ತಿಂಗಳು ದಾಸ್ತಾನು ಮಾಡಿ ಮಾರಾಟ ಮಾಡಿದರೆ 3500 ರೂ. ದೊರೆಯುತ್ತದೆ. ಆದರೆ ಅದನ್ನು ಹಿಟ್ಟು ಮಾಡಿ ಪ್ಯಾಕೆಟ್ ರೂಪದಲ್ಲಿ ಮಾರಾಟ ಮಾಡುವವ ವರ್ತಕರಿಗೆ ಒಂದು ಕೆ.ಜಿ.ಗೆ 80 ರೂ. ಸಿಗುತ್ತದೆ. ಮಾರಾಟ ಮಾಡುವವರಿಗೆ 40 ರೂ. ಹೆಚ್ಚಿಗೆ ದೊರೆಯುತ್ತದೆ. ಈ ಕೆಲಸವನ್ನು ರೈತ ಮಹಿಳೆಯರು ಮಾಡಬೇಕು ಎಂಬ ಕಾರಣಕ್ಕೆ ಸರ್ಕಾರ ಯೋಜನೆ ರೂಪಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಹೆಣ್ಣು ಮಕ್ಕಳೂ ಸಹ ದೇಶದಲ್ಲಿ ಬೆಳವಣಿಗೆ ಸಾಧಿಸಬೇಕು. ಅವರೂ ಸಹ ಸಮಾಜದ ಮುಖ್ಯವಾಹಿನಿಗೆ ಬರಬೇಕು. ದೇಶದ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂಬ ಕಾರಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!