ಪಂಪ್‌ಸೆಟ್‌ಗೆ ರೈತರ ಹಣದಲ್ಲಿ ಟ್ರಾನ್ಸ್‌ಫಾರ್ಮರ್: ಆದೇಶ ಹಿಂಪಡೆಯದಿದ್ರೆ ಹೋರಾಟ ಎಂದ ಈರಣ್ಣ ಕಡಾಡಿ

ಹೊಸದಿಗಂತ ವರದಿ ಬೆಂಗಳೂರು:

ಇನ್ನು ಮುಂದೆ ರೈತರ ಪಂಪ್ ಸೆಟ್‍ಗಳಿಗೆ ವಿದ್ಯುತ್ ಪಡೆಯಬೇಕಾದರೆ ಸ್ವಂತ ಖರ್ಚಿನಲ್ಲಿ ಟ್ರಾನ್ಸ್‍ಫಾರ್ಮರ್, ಕಂಬ ಮತ್ತು ತಂತಿ ಸೇರಿದಂತೆ ವಿದ್ಯುತ್ ಗೆ ಸಂಬಂಧಪಟ್ಟ ವಸ್ತುಗಳನ್ನು ರೈತರೇ ಖರೀದಿಸಬೇಕೆಂದು ಸರ್ಕಾರ ಆದೇಶ ಮಾಡಿದ್ದು ಅತ್ಯಂತ ಖಂಡನೀಯವಾಗಿದೆ. ಬರಗಾಲ, ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ಕಂಗಾಲಾದ ರೈತರ ಗಾಯದ ಮೇಲೆ ಬರೆ ಎಳೆದಂತಿದೆ. ಅಲ್ಲದೆ, ಇದು ಬಿಸಿ ಕಾವಲಿಯಲ್ಲಿದ್ದ ರೈತರನ್ನು ಸರಕಾರ ಬೆಂಕಿಗೆ ದೂಡಿದಂತಾಗಿದೆ ಎಂದು ರೈತ ಮೋರ್ಚಾದ ರಾಜ್ಯ ಅಧ್ಯಕ್ಷ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.

ಒಂದು ವೇಳೆ ಈ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯದ ಸುಮಾರು 35 ಲಕ್ಷ ಪಂಪ್‍ಸೆಟ್‍ಗಳ ರೈತ ಬಳಕೆದಾರರೊಂದಿಗೆ ಬಿಜೆಪಿ ರೈತ ಮೋರ್ಚಾವು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಆತ್ಮಹತ್ಯೆಗೆ ಮುಂದಾಗಿದ್ದಾರೆ: ಈ ಹಿಂದೆ ಪ್ರತಿ ನೀರಾವರಿ ಪಂಪ್‍ಸೆಟ್‍ಗಳಿಗೆ ಕೇವಲ 24 ಸಾವಿರ ರೂಪಾಯಿ ಶುಲ್ಕ ನಿಗದಿಯಾಗಿತ್ತು. ಸರ್ಕಾರದ ಈ ಆದೇಶದಿಂದ ಕನಿಷ್ಠ 2 ಲಕ್ಷ ರೂಪಾಯಿ ನೀಡಿ ವಿದ್ಯುತ್ ಸಂಪರ್ಕ ಪಡೆಯಬೇಕಾದ ಅನಿವಾರ್ಯತೆಗೆ ರೈತರನ್ನು ನೂಕಲಾಗಿದೆ. ಬರಗಾಲದಿಂದ ಕಂಗೆಟ್ಟಿರುವ ರೈತರು ಬದಲಿ ಮಾರ್ಗಗಳಿಲ್ಲದೆ ಹಲವೆಡೆ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ರೈತರ ಆತಂಕ ಹೆಚ್ಚಾಗಿದ್ದು, ಪರಿಣಾಮವಾಗಿ ರೈತರು ಮುಂದೇನು ಎಂದು ಯೋಚಿಸುವಂತಾಗಿದೆ ಎಂದು ವಿವರಿಸಿದ್ದಾರೆ.

223 ತಾಲೂಕುಗಳು ಸಂಪೂರ್ಣ ಬರಪೀಡಿತ: ಮಳೆಯ ಅಭಾವದಿಂದ ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದ್ದು, ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಪ್ರಸ್ತುತ ಹಿಂಗಾರಿನಲ್ಲಿ ಕೂಡ ಮಳೆಯ ಅಭಾವದಿಂದಾಗಿ ರೈತನ ಬೆಳೆಗಳು ಸಂಪೂರ್ಣ ನಾಶವಾಗಿವೆ. ಸರ್ಕಾರದ ವರದಿಯ ಪ್ರಕಾರ ರಾಜ್ಯದಲ್ಲಿ 223 ತಾಲೂಕುಗಳು ಸಂಪೂರ್ಣ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ ಎಂದು ಗಮನ ಸೆಳೆದಿದ್ದಾರೆ.

ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 200 ಕ್ಕಿಂತಲೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇದು ದುರ್ದೈವದ ಮತ್ತು ಅತ್ಯಂತ ಕಳವಳಿಕಾರಿ ಸಂಗತಿಯಾಗಿದೆ. ರಾಜ್ಯದಲ್ಲಿ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲಿಕ್ಕೆ ರೈತರು ತೆರೆದ ಬಾವಿ, ಕೊಳವೆ ಬಾವಿಗಳ ಮೊರೆ ಹೊಗಿದ್ದಾರೆ. ಆದರೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ; ಜೊತೆಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ರೈತರು ಬಸವಳಿದು ಹೋಗಿದ್ದಾರೆ ಎಂದು ಅವರು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂತ್ರಿಗಳು ಭೇಟಿ ನೀಡಿಲ್ಲ: ಈ ಹಿಂದಿನ ರೈತ ಪರವಾದ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂ ಚೇತನ, ಭೂ ಸಿರಿ, ರೈತ ಶಕ್ತಿ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸೇರಿದಂತೆ ಅನೇಕ ಯೋಜನೆಗಳನ್ನು ಅನುದಾನದ ಕೊರತೆ ಎಂಬ ನೆಪವೊಡ್ಡಿ ರದ್ದು ಮಾಡಲಾಗಿದೆ. ವಿದ್ಯುತ್ ಅಭಾವ, ರೈತರ ಆತ್ಮಹತ್ಯೆ ಹಾಗೂ ಬರ ಪೀಡಿತ ಪ್ರದೇಶದ ರೈತರ ಸಹಾಯಕ್ಕೆ ಬರಬೇಕಾದ ಸರ್ಕಾರ ಮತ್ತು ಮಂತ್ರಿಗಳು ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಆದೇಶ ರದ್ದುಗೊಳಿಸಿ: ರೈತರ ಕೃಷಿ ಪಂಪಸೆಟ್‍ಗಳಿಗೆ ಸ್ವಂತ ಖರ್ಚಿನಲ್ಲಿಯೇ ಹೊಸ ಸಂಪರ್ಕ ಪಡೆಯುವ ಆದೇಶವನ್ನು ಸರ್ಕಾರ ರದ್ದುಗೊಳಿಸಿ, ಈ ಹಿಂದಿನಂತೆಯೇ ವಿದ್ಯುತ್ ಸಂಪರ್ಕ ನೀಡಬೇಕಾಗಿ ಸರ್ಕಾರವನ್ನು ಕರ್ನಾಟಕ ಬಿಜೆಪಿ ರೈತ ಮೋರ್ಚಾ ಒತ್ತಾಯಿಸುತ್ತದೆ. ಸರಕಾರವು ತನ್ನ ಈ ಆದೇಶವನ್ನು ಹಿಂಪಡೆಯದಿದ್ದರೆ ರೈತ ಬಳಕೆದಾರರೊಂದಿಗೆ ಬಿಜೆಪಿ ರೈತ ಮೋರ್ಚಾವು ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಮಂಡಲಗಳಲ್ಲಿ ನ.10 ರಂದು ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!