ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆ ದೆಹಲಿ ಗಡಿಯ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವ ಕ್ರಮವನ್ನು ಹರಿಯಾಣ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ.
ಪ್ರಚೋದನಕಾರಿ ಮಾಹಿತಿ, ಸುಳ್ಳು ಸುದ್ದಿ ಹರಿದಾಡುವುದನ್ನು ತಪ್ಪಿಸುವ ಸಲುವಾಗಿ ಗಡಿ ಜಿಲ್ಲೆಗಳಾದ ಅಂಬಾಲ, ಕುರುಕ್ಷೇತ್ರ, ಕೈತಾಲ್, ಸಿಂದ್, ಹಿಸಾರ್, ಫತೇಹಬಾದ್ ಮತ್ತು ಸಿರ್ಸಾದಲ್ಲಿ ಮೊಬೈಲ್ ಇಂಟರ್ನೆಟ್ ಹಾಗೂ ಎಸ್‌ಎಂಎಸ್ ಸೇವೆಯನ್ನು ಫೆಬ್ರುವರಿ 13ರಂದು ಸ್ಥಗಿತಗೊಳಿಸಲಾಗಿತ್ತು.ಅದಾದ ಬಳಿಕ ಐದು ಬಾರಿ (ಫೆಬ್ರುವರಿ 15, 17, 19, 20 ಹಾಗೂ 21ರಂದು) ವಿಸ್ತರಿಸಲಾಗಿತ್ತು. ಇದೀಗ ಮತ್ತೆ ವಿಸ್ತರಿಸಿದೆ.
ಇಂಟರ್ನೆಟ್ ಸ್ಥಗಿತ ಕ್ರಮ ಮುಂದುವರಿಕೆ ಕುರಿತು ಹರಿಯಾಣದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಟಿ.ವಿ.ಎಸ್.ಎನ್ ಪ್ರಸಾದ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರೀಶೀಲಿಸಿದರೆ, ಅಂಬಾಲ, ಕುರುಕ್ಷೇತ್ರ, ಕೈತಾಲ್, ಸಿಂದ್, ಹಿಸಾರ್, ಫತೇಹಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಈ ಜಿಲ್ಲೆಗಳಲ್ಲಿ ವದಂತಿ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಇಂಟರ್ನೆಟ್ ಸೇವೆ ದುರ್ಬಳಕೆಯಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾಗಬಹುದು’ ಎಂದು ಪ್ರಸಾದ್ ತಿಳಿಸಿದ್ದಾರೆ.