April 13, 2026
Monday, April 13, 2026
spot_img

ರೈತರ ಪಾಲಿನ ಗೊಬ್ಬರ ಕಾಳಸಂತೆಕೋರರ ಪಾಲು: ಅಧಿಕಾರಿಗಳ ಮಿಂಚಿನ ದಾಳಿಗೆ ಗೋಡೌನ್ ಸೀಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಗೊಬ್ಬರಕ್ಕೆ ಬರಲಿರುವ ಭಾರಿ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಳ್ಳಲು ಸಂಚು ರೂಪಿಸಿದ್ದ ಕಾಳಸಂತೆಕೋರರ ಜಾಲವನ್ನು ಕೃಷಿ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಭೇದಿಸಿದ್ದಾರೆ.

ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಎಡ್ವಿನ್ ಎಂಬುವವರಿಗೆ ಸೇರಿದ ಗೋಡೌನ್ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ರೈತರಿಗೆ ವಿತರಿಸಬೇಕಿದ್ದ ಸುಮಾರು 4,000ಕ್ಕೂ ಹೆಚ್ಚು ಚೀಲ ಯೂರಿಯಾ ಗೊಬ್ಬರವನ್ನು ಇಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಸದ್ಯ ಟಿಬಿ ಡ್ಯಾಂ ಗೇಟ್ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಜಿಲ್ಲೆಯಲ್ಲಿ ಎರಡನೇ ಬೆಳೆಗೆ ನೀರಿನ ಕೊರತೆಯಿದೆ. ಈ ಕಾರಣದಿಂದ ಪ್ರಸ್ತುತ ಗೊಬ್ಬರದ ಬೇಡಿಕೆ ಕಡಿಮೆಯಿರುವುದನ್ನು ಲಾಭ ಮಾಡಿಕೊಂಡಿರುವ ಆರೋಪಿಗಳು, ಇದನ್ನು ಕಡಿಮೆ ಬೆಲೆಗೆ ಸಂಗ್ರಹಿಸಿ ಜೂನ್ ತಿಂಗಳ ಮುಂಗಾರು ವೇಳೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ನಡೆದ ಈ ದಾಳಿಯಲ್ಲಿ ಬೃಹತ್ ಪ್ರಮಾಣದ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದ್ದು, ಗೋಡೌನ್ ಮಾಲೀಕ ಎಡ್ವಿನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !