July 28, 2026
Tuesday, July 28, 2026
spot_img

ಸಂಸತ್ತಿನಲ್ಲಿ ಇನ್ನು ಮಹಿಳಾ ಪಾರಮ್ಯ: 21ನೇ ಶತಮಾನದ ಐತಿಹಾಸಿಕ ನಿರ್ಧಾರಕ್ಕೆ ‘ನಮೋ’ ಸನ್ನದ್ಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸಂಸತ್ತು ಹೊಸ ಇತಿಹಾಸದ ಹೊಸ್ತಿಲಲ್ಲಿದ್ದು, 21ನೇ ಶತಮಾನದ ಅತ್ಯಂತ ಪ್ರಮುಖ ನಿರ್ಧಾರವೊಂದು ಮಹಿಳಾ ಶಕ್ತಿಗೆ ಸಮರ್ಪಿತವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ದೇಶದ ನಾರಿ ಶಕ್ತಿಯನ್ನು ಸಂಭ್ರಮಿಸುವ ಈ ಘಟ್ಟವು ಭಾರತದ ಪ್ರಜಾಪ್ರಭುತ್ವದ ಮೈಲಿಗಲ್ಲಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯ ಕುರಿತು ಸುಮಾರು ನಾಲ್ಕು ದಶಕಗಳಿಂದಲೂ ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹಲವು ತಲೆಮಾರುಗಳ ನಾಯಕರು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಆದ ಪ್ರಯತ್ನಗಳನ್ನು ಮಾಡಿವೆ. ಅಂತಿಮವಾಗಿ 2023ರಲ್ಲಿ ಈ ಕಾಯ್ದೆಯನ್ನು ಮಂಡಿಸಿದಾಗ, ಎಲ್ಲಾ ಪಕ್ಷಗಳು ಒಗ್ಗಟ್ಟಿನಿಂದ ಇದನ್ನು ಬೆಂಬಲಿಸಿರುವುದು ವಿಶೇಷ. ಈ ಐತಿಹಾಸಿಕ ಕಾಯ್ದೆಯು 2029ರ ವೇಳೆಗೆ ಸಂಪೂರ್ಣವಾಗಿ ಜಾರಿಗೆ ಬರಲಿದೆ ಎಂದು ಪ್ರಧಾನಿ ತಿಳಿಸಿದರು.

ಹೆಣ್ಣುಮಕ್ಕಳ ದೈನಂದಿನ ಸವಾಲುಗಳನ್ನು ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ಈ ಸಂದರ್ಭದಲ್ಲಿ ಮೆಲುಕು ಹಾಕಿದರು.

ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ‘ಸ್ವಚ್ಛ ಭಾರತ ಅಭಿಯಾನ’ ಮತ್ತು ಉಚಿತ ಸ್ಯಾನಿಟರಿ ಪ್ಯಾಡ್‌ಗಳ ವಿತರಣೆಯ ಮೂಲಕ ಹೆಣ್ಣುಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ.

ಕ್ರೀಡೆಯಲ್ಲಿ ಆಸಕ್ತಿ ಇರುವ ಹೆಣ್ಣುಮಕ್ಕಳಿಗೆ ವಾರ್ಷಿಕ 1 ಲಕ್ಷ ರೂಪಾಯಿಗಳ ಬೆಂಬಲ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ದೇಶಸೇವೆಯ ಕನಸು ಕಾಣುವವರಿಗಾಗಿ ಸೈನಿಕ ಶಾಲೆಗಳ ಬಾಗಿಲನ್ನು ತೆರೆಯಲಾಗಿದೆ.

ಅಡುಗೆಮನೆಯ ಹೊಗೆಯಿಂದ ಮುಕ್ತಿ ನೀಡಲು ‘ಉಜ್ವಲ ಯೋಜನೆ’, ಮನೆ ಮನೆಗೆ ‘ನಲ್ಲಿ ನೀರು’ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ‘ಆಯುಷ್ಮಾನ್ ಭಾರತ್’ ಅಡಿಯಲ್ಲಿ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟಾರೆಯಾಗಿ, ಜನನದಿಂದ ಹಿಡಿದು ದೇಶದ ಆಡಳಿತದವರೆಗೆ ಮಹಿಳೆಯರು ಸಬಲರಾಗಲು ಪೂರಕವಾದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !