ಹೊಸದಿಗಂತ ವರದಿ ಬೆಳಗಾವಿ:
ಕಬ್ಬಿಗೆ ಸೂಕ್ತ ಬೆಲೆ ನಿಗದಿ ಹಾಗೂ ರಾಜ್ಯ ಸಲಹಾ ಬೆಲೆ (ಎಸ್ಎಪಿ) ಜಾರಿಗೆ ಆಗ್ರಹಿಸಿ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದೆ. ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನೀಡಬೇಕೆಂಬ ಬೇಡಿಕೆಯೊಂದಿಗೆ ಸಾವಿರಾರು ರೈತರು ಹೋರಾಟ ಮುಂದುವರಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಇಂದೇ ಗಡುವು
ರೈತರ ಬೇಡಿಕೆಗಳಿಗೆ ಗುರುವಾರ ಸಂಜೆ ಒಳಗಾಗಿ ಸರ್ಕಾರ ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಕರ್ನಾಟಕ ಬಂದ್‌ಗೆ ಕರೆ ನೀಡುವುದು ಹಾಗೂ ಶಾಸಕರು, ಸಚಿವರ ಮನೆಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ರೈತ ಮುಖಂಡರು ನೀಡಿದ್ದಾರೆ.
ಬೆಂಗಳೂರಿನ ಸಭೆಗೆ ಅಸಮಾಧಾನ
ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಕೇಂದ್ರ ಸಮಿತಿ ಸಭೆ ನಡೆಯುತ್ತಿರುವ ನಡುವೆಯೇ ಗುರ್ಲಾಪುರದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸುವುದರೊಂದಿಗೆ ಎಸ್ಎಪಿ ಜಾರಿಗೊಳಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಕೋರ್ ಕಮಿಟಿ ಸಭೆಯತ್ತ ಚಿತ್ತ
ಇಂದು ಸಂಜೆ ನಡೆಯಲಿರುವ ರೈತರ ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರವಾಗುವ ಸಾಧ್ಯತೆಯಿದೆ. ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿರುವ ರೈತರು, ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ದೃಢ ನಿಲುವು ವ್ಯಕ್ತಪಡಿಸಿದ್ದಾರೆ.



