Sunday, July 3, 2022

Latest Posts

ಕಾಶ್ಮೀರ ಕೊಲೆಗೆ ಫಿಲಂ ಕಾರಣ, ಫಾರೂಖ್‌ ಅಬ್ದುಲ್ಲಾ ಅಸಂಬದ್ದ ಹೇಳಿಕೆ: ವಿವೇಕ್‌ ಅಗ್ನಿಹೋತ್ರಿ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ʼದಿ ಕಾಶ್ಮೀರ್‌ ಫೈಲ್ಸ್ʼ ಚಿತ್ರವು ಜನರಲ್ಲಿ ದ್ವೇಷಭಾವನೆ ಹುಟ್ಟು ಹಾಕಿದೆ, ಪ್ರಸ್ತುತ ಕಾಶ್ಮೀರದಲ್ಲಿ ಮತ್ತೆ ಅಶಾಂತಿಯುಂಟಾಗಲು ಈ ಚಿತ್ರವೇ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಪ್ರಸ್ತಾಪಿಸಲು ನಾವು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದ್ದೇವೆ. ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ದೇಶದಲ್ಲಿ ದ್ವೇಷ ಹುಟ್ಟು ಹಾಕಿದೆ. ಅಂತಹ ಚಲನಚಿತ್ರಗಳನ್ನು ನಿಷೇಧಿಸಬೇಕು” ಎಂದು ಅಬ್ದುಲ್ಲಾ ಹೇಳಿದ್ದಾರೆ.

ಇನ್ನು ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ಬಿಡುಗಡೆಯಾದ ನಂತರ ಕಣಿವೆಯಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. “ನಾವು ಕಾಶ್ಮೀರಿ ಪಂಡಿತರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಿದ್ದೇವೆ. . 2010, 2016 ರಲ್ಲಿ ಗಲಭೆಗಳಾದರೂ ಯಾವುದೇ ಹತ್ಯೆ ನಡೆದಿಲ್ಲ. ಕಾಶ್ಮೀರ ಫೈಲ್ಸ್ ಚಲನಚಿತ್ರವು ಇದಕ್ಕೆ ಪ್ರಚೋದನೆ ನೀಡಿದೆ. ನೈಜ ವಿಷಯಗಳಿಂದ ಗಮನವನ್ನು ಸೆಳೆಯಲು ಹಿಂದೂ-ಮುಸ್ಲಿಂ ಸಮಸ್ಯೆಗಳನ್ನು ಸೃಷ್ಟಿಸಲಾಗಿದೆ” ಎಂದು ಮುಫ್ತಿ ಹೇಳಿದ್ದಾರೆ.

ರಾಹುಲ್‌ ಭಟ್‌ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಗುಪ್ಕರ್‌ ಒಕ್ಕೂಟವು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿತ್ತು. ಇದರಲ್ಲಿ ಮುಫ್ತಿ, ಎನ್‌ಸಿ ಎಂಪಿ ಹಸ್ನೈನ್ ಮಸೂದಿ ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಹಿರಿಯ ಉಪಾಧ್ಯಕ್ಷ ಮುಜಾಫರ್ ಶಾ ಮತ್ತಿತರರಿದ್ದರು. ರಾಹುಲ್‌ ಭಟ್‌ ಹತ್ಯೆಯ ವಿಷಯವಾಗಿ ಮೋದಿಯವರು ಮೌನವಾಗಿದ್ದಾರೆ ಅವರಿಗೆ ಚಲನಚಿತ್ರದ ಕುರಿತು ಮಾತನಾಡಲು ಮಾತ್ರ ಬರುತ್ತದೆಯೇ ಹೊರತು ಜನರ ಹತ್ಯೆಯ ಬಗ್ಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿಕೂಡ ಚಿತ್ರವನ್ನು ಉಲ್ಲೇಖಿಸಿ ಟೀಕಿಸಿದ್ದರು.

ಈ ಆಪಾದನೆಯ ಕುರಿತು ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದಾರೆ. ಕಾಶ್ಮೀರದಲ್ಲಿಗಲಭೆಗಳು ನಡೆಯುತ್ತಿದ್ದರೂ ಆ ಸಂದರ್ಭದಲ್ಲಿ ಕಾಶ್ಮೀರದ ಮುಖ್ಯಮಂತ್ರಿ ಯಾಗಿದ್ದ ಒಬ್ಬರು ಬಾಲಿವುಡ್‌ ಹಿರೋಯಿನ್‌ಗಳ ಜೊತೆ ಬೈಕ್‌ ನಲ್ಲಿ ಸುತ್ತಾಡುತ್ತಾ ಗಾಲ್ಫ್‌ ಕ್ರೀಡೆಯ ಮೋಜಿನಲ್ಲಿದ್ದರು ಎಂದು ಹೇಳುವ ದಿ ಕಾಶ್ಮೀರೀ ಫೈಲ್ಸ್‌ ಚಿತ್ರದ ವೀಡಿಯೋ ತುಣುಕೊಂದನ್ನು ಹಂಚಿಕೊಂಡು ʼಇದು ಯಾರು ಎಂದು ಊಹಿಸಿʼ ಎಂದಿದ್ದಾರೆ. ಹಾಗೂ ಕಾಶ್ಮೀರದ ಉಚ್ಛನ್ಯಾಯಾಲಯದಲ್ಲಿ ಗಾಂಧಿ ಪ್ರತಿಮೆಯ ವಿರೋಧ, ಕಾಂಗ್ರೆಸ್‌ ವಿರುದ್ಧವೇ ಫತ್ವಾ ಜಾರಿ ಮಾಡಿದ್ದ ಪಕ್ಷದ ಬಗ್ಗೆ ನಿಮಗೆ ಗೊತ್ತೇ? ಎಂದು ರಾಹುಲ್‌ ಗಾಂಧಿಯವರನ್ನು ಉಲ್ಲೇಖಿಸಿ ಚಿತ್ರದ ಇನ್ನೊಂದು ತುಣುಕನ್ನು ಟ್ವೀಟ್‌ ಮಾಡುವ ಮೂಲಕ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss