ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿದೆ ಎಂಬ ಆಂಧ್ರ ಪ್ರದೇಶ ಸರ್ಕಾರದ ಹೇಳಿಕೆ ಬೆನ್ನಲ್ಲೇ ಅಯೋಧ್ಯೆ ರಾಮಮಂದಿರದಲ್ಲೂ ಇದೇ ಲಡ್ಡು ವಿತರಣೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಹಿಂದೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ತಿರುಮಲದಿಂದ ಟಿಟಿಡಿ ಸುಮಾರು 1 ಲಕ್ಷ ಲಡ್ಡುಗಳನ್ನು ರವಾನೆ ಮಾಡಿತ್ತು. ಈ ಲಡ್ಡುಗಳೂ ಕೂಡ ಕಲಬೆರಕೆ ಲಡ್ಡುಗಳಾಗಿತ್ತೇ ಎಂಬ ಅನುಮಾನ ಮೂಡುತ್ತಿದೆ.
ಇನ್ನು ತಿರುಮಲ ಲಡ್ಡು ಪ್ರಸಾದದಲ್ಲಿ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಯೋಧ್ಯೆ ರಾಮಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು, ‘ಮೀನಿನ ಎಣ್ಣೆಯನ್ನು ಬೆರೆಸಿರುವುದು ತಪಾಸಣೆಯಿಂದ ಸ್ಪಷ್ಟವಾಗಿದೆ. ಇದೆಲ್ಲ ಯಾವಾಗಿಂದ ನಡೆಯುತ್ತಿದೆ ಎಂಬುದು ಇನ್ನೂ ತಿಳಿದಿಲ್ಲ, ಇದು ಬಹುದೊಡ್ಡ ಅಂತಾರಾಷ್ಟ್ರೀಯ ಪಿತೂರಿಯಾಗಿದೆ. ಸನಾತನ ಧರ್ಮದ ಮೇಲಿನ ದಾಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕು’ ಎಂದು ಆಗ್ರಹಿಸಿದ್ದಾರೆ.
ತಿರುಮಲದಲ್ಲಿ ಶ್ರೀವಾರಿ ದೇಗುಲದಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ ಬಳಕೆ ಮಾಡಲಾಗುತ್ತಿದ್ದ ತುಪ್ಪ ಕಲ್ಮಶವಾಗಿತ್ತು. ಕಳಪೆ ಗುಣಮಟ್ಟದ್ದಾಗಿತ್ತು, ನಾನು ಇದನ್ನು ಹಲವು ವರ್ಷಗಳ ಹಿಂದೆಯೇ ಗಮನಿಸಿದ್ದೇನೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಟ್ರಸ್ಟ್ ಬೋರ್ಡ್ ಅಧ್ಯಕ್ಷರ ಮುಂದೆ ಇಟ್ಟರೂ ಅವರು ತಲೆಕೆಡಿಸಿಕೊಳ್ಳಲಿಲ್ಲ. ಹೀಗಾಗಿ ನನ್ನದು ಏಕಾಂಗಿ ಹೋರಾಟವಾಯಿತು. ಕೋಟ್ಯಂತರ ಭಕ್ತರು ಅಪಾರ ನಂಬಿಕೆ ಮತ್ತು ಭಕ್ತಿ ಹೊಂದಿರುವ ಪವಿತ್ರ ದೇವಾಲಯದಲ್ಲಿ ಇಂತಹ ಮಹಾಪಾಪಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.