ಹೊಸದಿಗಂತ ವರದಿ,ಮಂಗಳೂರು:
ಕರಾವಳಿ ಭಾಗದಲ್ಲಿ ಆರ್ಥಿಕವಾಗಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಉದ್ಯಮ, ವ್ಯಾಪಾರಿಗಳನ್ನು ಒಂದೆಡೆ ಸೇರಿಸಿಕೊಂಡು ಅತ್ಯಪೂರ್ವ ಬಿಎನ್‌ಐ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ ನಡೆಸುತ್ತಿರುವುದು ಮಹತ್ವದ ಮೈಲಿಗಲ್ಲು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಬಿಸ್‌ನೆಸ್ ನೆಟ್‌ವರ್ಕ್ ಇಂಟರ್‌ನ್ಯಾಶನಲ್ (ಬಿಎನ್‌ಐ) ಮಂಗಳೂರು ಮತ್ತು ಉಡುಪಿಯ ವತಿಯಿಂದ ನಗರದ ಡಾ. ಟಿ.ಎಂ.ಎ. ಪೈ ಕನ್ವೆಶ್ಶನ್ ಸೆಂಟರ್‌ನಲ್ಲಿ ಸೆ.23ರವರೆಗೆ ಆಯೋಜಿಸಲಾಗಿರುವ ಅತ್ಯಪೂರ್ವ ಬಿಎನ್‌ಐ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ-2024 ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಪ್ರದೇಶದ ಆರ್ಥಿಕ ಚಲನಶೀಲತೆಯ ಮೇಲೆ ಅಲ್ಲಿನ ಅಭಿವೃದ್ದಿ ನಿಂತಿದೆ. ಒಂದು ಪ್ರದೇಶ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ದಿಯಾಗಲು ಆರ್ಥಿಕ ಸಂಚಲನವೇ ಮೂಲ ಕಾರಣ. ಈ ನಿಟ್ಟಿನಲ್ಲಿ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ ಉತ್ತಮ ಯೋಜನೆ. ಮೊದಲು ಉದ್ಯಮ ಹಾಗೂ ರಾಜಕೀಯ ಬೇರೆ ಬೇರೆ ಆಗಿತ್ತು. ಆಗ ಒಬ್ಬರನ್ನೊಬ್ಬರ ಸಹಕಾರ ಮಾತ್ರ ಪಡೆಯಲಾಗುತ್ತಿತ್ತು. ಆದರೆ ಕಾಲ ಕಳೆದಂತೆ ಈಗ ಉದ್ಯಮದ ಜತೆಗೆ ರಾಜಕೀಯವೂ ಜತೆಯಾಗಿಯೇ ನಡೆಯುತ್ತಿದೆ ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಕಳೆದ ೩ ವರ್ಷಗಳಿಂದ ಮಂಗಳೂರಿನಲ್ಲಿ ಯೋಜನೆಗೊಳ್ಳುತ್ತಿರುವ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ ಯಶಸ್ವಿಯಾಗಿ ನಡೆದು ಉದ್ಯಮಿಗಳಿಗೆ, ಗ್ರಾಹಕರಿಗೆ ಹಚ್ಚಿನ ಲಾಭ ತಂದಿದೆ. ಬಿಎನ್‌ಐ ಪ್ರಪಂಚದ 79 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಕ್ಸ್‌ಪೋದ ಮೂಲಕ ಕರಾವಳಿಯಲ್ಲೂ 160 ಕೋ.ರೂಗಳಿಗೂ ಅಧಿಕ ಆರ್ಥಿಕ ವ್ಯವಹಾರ ನಡೆಸುತ್ತಿದೆ. ಚಿನ್ನಾಭರಣ ವ್ಯಾಪಾರ ಹಾಗೂ ಕಾರು ಮಾರಾಟದಲ್ಲಿ ದೇಶದಲ್ಲಿಯೇ ಮಂಗಳೂರು ಅದ್ವಿತೀಯ ನಗರವಾಗಿ ಮೂಡಿಬಂದಿದೆ. ಇಂತಹ ನಗರದಲ್ಲಿ ನಿಯಮಿತವಾಗಿ ವಸ್ತುಪ್ರದರ್ಶನ ನಡೆಸಲು ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡಬೇಕಾಗಿದೆ ಎಂದರು.
ಬಿಎನ್‌ಐ ಸಂಸ್ಥೆಯ ಎಲ್ಲಾ ಸದಸ್ಯ ಸಂಸ್ಥೆಗಳ ಮಾಹಿತಿ, ಉದ್ದಿಮೆಯ ವಿಧಗಳನ್ನೊಳಗೊಂಡ ಮಾಹಿತಿ ಪುಸ್ತಕವನ್ನು ಶಾಸಕ ವೇದವ್ಯಾಸ ಕಾಮತ್ ಬಿಡುಗಡೆಗೊಳಿಸಿದರು.
ಬಿಎನ್‌ಐ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್.ಶರ್ಮ, ಪ್ರೀತಿ ಶರ್ಮ ಉಪಸ್ಥಿತರಿದ್ದರು. ಬಿಎನ್‌ಐ ಅಧ್ಯಕ್ಷ ಮೋಹನ್‌ರಾಜ್ ಸ್ವಾಗತಿಸಿದರು.
ಪ್ರಮುಖರಾದ ಮಹೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಸುನಿಲ್ ದತ್ತ್ ಪೈ, ಪ್ರಜ್ವಲ್ ಶೆಟ್ಟಿ, ಡಾ. ಸಚಿನ್ ನಡ್ಕಸಹಿತ ಹಲವರು ಉಪಸ್ಥಿತರಿದ್ದರು.
ಮೂರನೇ ವರ್ಷದ ಬಿಎನ್‌ಐ ಬಿಗ್ ಬ್ರ್ಯಾಂಡ್ ಎಕ್ಸ್‌ಪೋದಲ್ಲಿ ಸಂಸ್ಥೆಯ 120 ಸದಸ್ಯರು ತಮ್ಮ ಉದ್ದಿಮೆಗಳ ಪ್ರದರ್ಶನ ನಡೆಸುತ್ತಿದ್ದು, ಸೆ.23 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಯಲಿದೆ. ಕಟ್ಟಡ ಸಾಮಗ್ರಿ, ವಿಮೆ, ಆಭರಣ, ಆಟೋಮೊಬೈಲ್, ಗಾರ್ಮೆಂಟ್ಸ್, ಲೈಟಿಂಗ್ ಸೊಲ್ಯೂಷನ್, ಇನ್ಶೂರೆನ್ಸ್, ಗಾರ್ಮೆಂಟ್ಸ್, ಐ.ಟಿ. ಪ್ರಾಡಕ್ಟ್, ಸಾಫ್ಟ್‌ವೇರ್, ಆಫೀಸ್ ಆಂಡ್ ಹೋಂ ಫರ್ನಿಚರ್‍ಸ್, ಫುಡ್ ಪ್ರಾಡಕ್ಟ್ , ಬ್ಯಾಂಕಿಂಗ್, ಹಾರ್ಡ್‌ವೇರ್ ಸಹಿತ 120 ಕ್ಕೂ ಅಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನವಿದೆ.
ಮಂಗಳೂರು ನಗರ ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ, ಕೇರಳ, ಕೊಡಗು ಮೊದಲಾದ ಪ್ರದೇಶಗಳ ಜನ ಉತ್ತಮ ಗುಣಮಟ್ಟದ ಉತ್ಪನ್ನ, ಸೇವೆಗಳನ್ನು ಪಡೆಯಲು ಈ ಪ್ರದರ್ಶನ ಸಹಕಾರಿಯಾಗಲಿದೆ ಎಂದು ಬಿಎನ್‌ಐ ಅಧ್ಯಕ್ಷ ಮೋಹನ್‌ರಾಜ್ ತಿಳಿಸಿದರು. ಎಕ್ಸ್‌ಪೋದಲ್ಲಿ ಹೊಸ ದಿಗಂತ ಮಳಿಗೆಯೂ ಇದೆ.
ಬಿಎನ್‌ಐ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ 2024 ಅಂಗವಾಗಿ ಹೊಸ ದಿಗಂತ ಹೊರತಂದಿರುವ ದಿಗಂತ ಎಕ್ಸ್‌ಪ್ರೆಸ್ ವಿಶೇಷ ಸಂಚಿಕೆಯನ್ನು ಈ ವೇಳೆ ಬಿಡುಗಡೆ ಮಾಡಲಾಯಿತು.