ಹೊಸದಿಗಂತ ವರದಿ, ರಾಯಚೂರು :
ಚಲಿಸುತ್ತಿದ್ದ ಎರಡು ಬೈಕ್‌ಗಳಿಗೆ ಕೆಎಸ್ಆರ್‌ಟಿಸಿ ಬಸ್ ಹಿಂಬದಿಯಿoದ ಡಿಕ್ಕಿ ಹೊಡೆದ ಪರಿಣಾಮ ರಾಯಚೂರು ಜಿಲ್ಲೆಯ ಮೂವರು, ಆಂದ್ರದ ಇಬ್ಬರು ಸೇರಿದಂತೆ ಒಟ್ಟು ಐವರ ಸಾವನ್ನಪ್ಪಿದ ಘಟನೆ ಆಂದ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಪಾಂಡವಗಲ್ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ರಾಯಚೂರು ಜಿಲ್ಲೆ ಮಾನ್ವಿ ಮೂಲದ ಮಾನ್ವಿ ಪಟ್ಟಣದ ಮಾನ್ವಿ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಾದ್ರಿ (೫೫), ಪತ್ನಿ ನಾಗರತ್ನಮ್ಮ (೪೪), ಪುತ್ರ ದೇವರಾಜು(೨೪), ಆಂದ್ರ ಪ್ರದೇಶದ ಆದೋನಿ ತಾಲೂಕಿನ ಕುಪ್ಪಗಲು ಗ್ರಾಮದ ಈರಣ್ಣ (೪೦) ಹಾಗೂ ಪತ್ನಿ ಆದಿಲಕ್ಷ್ಮಿ (೩೦)ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
೪ ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ. ಓರ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಂಗಾವತಿಯಿoದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಆದೋನಿಗೆ ತೆರಳುತ್ತಿದ್ದ ಮಾನ್ವಿ ಮೂಲದ ಹೇಮಾದ್ರಿ ಕುಟುಂಬದ ಬೈಕ್ ಹಾಗೂ ಕುಪ್ಪಗಲ್ಲು ಗ್ರಾಮದ ಕಡೆ ಹೊರಟಿದ್ದ ಈರಣ್ಣ ಕುಟುಂಬ ಚಲಿಸುತ್ತಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ.
ಸಾರಿಗೆ ಬಸ್‌ನ ಚಾಲಕನ ನಿಯಂತ್ರಣ ತಪ್ಪಿದ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.