ದೃಶ್ಯ ಸಿನಿಮಾ ಕಂಡು ಕೊಲೆಗೆ ಸ್ಕೆಚ್: 4 ತಿಂಗಳ ಬಳಿಕ ಸಿಕ್ಕಿಬಿದ್ದ ಆರೋಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಲಯಾಳಂ, ಹಿಂದಿ , ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ ಸಿನಿಮಾದಂತೆ ಮಹಿಳೆಯೋರ್ವಳನ್ನು ಕೊಲೆ ಮಾಡಿ ಕಸ ಡಂಪಿಂಗ್ ಯಾರ್ಡ್​ನಲ್ಲಿ ಹಾಕಿದ್ದ ಪ್ರಕರಣವನ್ನು ಕೊತ್ತನೂರು ಠಾಣೆ ಪೊಲೀಸರು (Police) ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಕೊತ್ತನೂರು ಪೊಲೀಸರು ಕಳೆದ 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಪ್ರಕರಣವನ್ನು ಬೇಧಿಸಿದ್ದು, ಆರೋಪಿ ಲಕ್ಷ್ಮಣ್ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿ ಲಕ್ಷ್ಮಣ್‌ 2024 ನವೆಂಬರ್ 25ರಂದು ಮೇರಿ ಎಂಬ ಮಹಿಳೆಯ ಕೊಲೆಗೆ ಸ್ಕೆಚ್ ಹಾಕಿದ್ದ. ಮೇರಿ ಮನೆಯ ಕರೆಂಟ್ ಕಟ್ ಮಾಡಿದ್ದ ಲಕ್ಷ್ಮಣ್, ಮನೆಯಲ್ಲಿ ಮಹಿಳೆ ಒಬ್ಬಳೇ ಇರ್ತಾಳೆ. ಕರೆಂಟ್ ಸರಿ ಮಾಡಲು ಕರೆಯುತ್ತಾಳೆ. ಆಗ ಕೊಲೆ ಮಾಡಲು ಸಂಚು ಹಾಕಿದ್ದನಂತೆ. ಆದರೆ ಆ ದಿನ ಮೇರಿ ಲಕ್ಷ್ಮಣ್‌ರನ್ನ ಕರೆದಿರಲಿಲ್ಲ. ಕೊನೆಗೆ ನವೆಂಬರ್ 26 ರಂದು ಲಕ್ಷ್ಮಣ್‌, ಮೇರಿಯನ್ನು ಕೊಲೆ ಮಾಡಿ ಕಸದ ಡಂಪಿಂಗ್ ಯಾರ್ಡ್‌ನಲ್ಲಿ ಎಸೆದು ಪರಾರಿಯಾಗಿದ್ದನು.

2 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಲಕ್ಷ್ಮಣ್‌, ಕನ್ನಡದ ದೃಶ್ಯ ಸಿನಿಮಾ ನೋಡಿ ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಆರೋಪಿ ಲಕ್ಷ್ಮಣ್ ಪೊಲೀಸರ ದಾರಿ ತಪ್ಪಿಸಲು ಒಟ್ಟು 4 ಸಿಮ್ ಕಾರ್ಡ್ ಬಳಸುತ್ತಿದ್ದ. ನವೆಂಬರ್ 26ರ ಬೆಳಗ್ಗೆ ಆತ ಬಳಸುತ್ತಿದ್ದ 3 ಸಿಮ್ ಕಾರ್ಡ್‌ ಅನ್ನು ಡಿಜೆ ಹಳ್ಳಿ ಪತ್ನಿ ಮನೆಯಲ್ಲಿಟ್ಟಿದ್ದ. ಮಧ್ಯಾಹ್ನ 3 ಗಂಟೆಗೆ ಆಟೋದಲ್ಲಿ ಮೃತದೇಹ ಹಾಕಿಕೊಂಡು ಹೋಗಿದ್ದು, ಬಾಗಲೂರು ಕಸ ಡಂಪಿಂಗ್ ಯಾರ್ಡ್‌ನಲ್ಲಿ ಮೃತದೇಹ ಎಸೆದು ಬಂದಿದ್ದ.

ಆಕೆಯ ಮೊಬೈಲ್ ಆನ್ ಮಾಡಿ ಕಸದ ಆಟೋದಲ್ಲಿ ಬಿಸಾಡಿದ್ದ. ಆರೋಪಿಯ ಸಿಡಿಆರ್ ಪರಿಶೀಲಿಸಿದ್ದ ಪೊಲೀಸರಿಗೆ ಘಟನೆಯಾದ ದಿನ ಆತನ ಲೊಕೇಷನ್ ಡಿಜೆ ಹಳ್ಳಿ ಇತ್ತು. ಹಾಗಾಗಿ ಆತನ ಮೇಲೆ ಪೊಲೀಸರಿಗೆ ಅನುಮಾನ ಬಂದಿರಲಿಲ್ಲ.

ಆದ್ರೆ ಕೊತ್ತನೂರು ನಾಗೇನಹಳ್ಳಿ ಸ್ಲಂ ಬೋರ್ಡ್‌ನಿಂದ 50 ವರ್ಷದ ಮೇರಿ ಎಂಬ ಮಹಿಳೆ ಕಾಣೆಯಾಗಿದ್ದರು. ಅದೇ ಸ್ಲಂ ಬೋರ್ಡ್ ನಿವಾಸಿಯಾಗಿದ್ದ ಲಕ್ಷ್ಮಣ್ ಕೂಡ ಅಂದಿನಿಂದ ಕಾಣೆಯಾಗಿದ್ದ. ಈ ಪ್ರಕರಣ ಬೆನ್ನತ್ತಿದ್ದ ಕೊತ್ತನೂರು ಪೊಲೀಸರು . ಆತನಿಗಾಗಿ ಹುಡುಕಾಟ ನಡೆಸಿದ್ದರು. ಇತ್ತೀಚೆಗೆ ಆರೋಪಿ ಲಕ್ಷ್ಮಣ್‌ ಪ್ರಿಯತಮೆ ಜೊತೆಗೆ ಸಂಪರ್ಕದಲ್ಲಿರೋದು ಪೊಲೀಸರಿಗೆ ಗೊತ್ತಾಗಿದೆ. ಪ್ರಿಯತಮೆ ಜೊತೆ ಮಾತಾಡುತ್ತಿದ್ದ ಆಸಾಮಾಯನ್ನು ಲಾಕ್ ಮಾಡಿದ ಪೊಲೀಸರು ಅರೆಸ್ಟ್ ಮಾಡಿ ವಿಚಾರಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಮೇರಿ ಎಂಬ ಮಹಿಳೆ ಗಂಡನಿಲ್ಲದೆ ಒಂಟಿಯಾಗಿ ವಾಸ ಮಾಡುತ್ತಿದ್ದರು. ಆಕೆ ಮೈಮೇಲಿದ್ದ 50 ಗ್ರಾಂ ಚಿನ್ನಕ್ಕಾಗಿ ಈ ಕೃತ್ಯ ನಡೆದಿದೆ.ಆರೋಪಿ ಲಕ್ಷ್ಮಣ್‌ ಮಹಿಳೆ ಮೈಮೇಲಿದ್ದ ಚಿನ್ನ ತೆಗೆದುಕೊಂಡು ಮೃತದೇಹ ಬಾಗಲೂರಿನ ಹೊಸೂರು ಬಂಡೆಗೆ ಬಿಸಾಡಿದ್ದ. ಆತನ ಸಮ್ಮುಖದಲ್ಲೇ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಹಿಳೆಯ ಚಿನ್ನಕ್ಕಾಗಿ ಈ ರೀತಿ ಮಾಡಿರೋದಾಗಿ ಲಕ್ಷ್ಮಮ್‌ ತಪ್ಪೊಪ್ಪಿಕೊಂಡಿದ್ದಾನೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!