October 15, 2026
Thursday, October 15, 2026
spot_img

ಯಾದಗಿರಿ ಬಳಿ ಭೀಕರ ಅಪಘಾತ: ಸ್ಥಳದಲ್ಲಿಯೇ ನಾಲ್ಕು ಮಂದಿ ದುರ್ಮ*ರಣ

ಹೊಸದಿಗಂತ ವರದಿ ಯಾದಗಿರಿ:

ಖಾಸಗಿ ಬಸ್ ಹಾಗೂ ಕಾರಿನ‌ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ಕು ಜನ ಪ್ರಯಾಣಿಕರು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿಯ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.

ಖಾಸಗಿ ಬಸ್ ಲಿಂಗಸುಗೂರಿನಿಂದ ಕಲಬುರ್ಗಿ ಕಡೆಗೆ ಹೊರಟಿತ್ತು. ಲಿಂಗಸುಗೂರ ಕಡೆಗೆ ಹೊರಟಿದ್ದ ಕಾರು 2 ವಾಹನಗಳ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಎರಡು ವಾಹನಗಳು ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಕಾರು ಮತ್ತು ಬಸ್ ಸಂಪೂರ್ಣ ಕರಕಲಾಗಿವೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸುಟ್ಟು ಕರಕಲಾಗಿದ್ದಾರೆ, ಸ್ಥಳದಲ್ಲಿರುವವರು ನೀಡಿರುವ ಮಾಹಿತಿ ಪ್ರಕಾರ ಆರು ಜನ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಬೆಂಕಿಯಲ್ಲಿ ನಾಲ್ಕು ಜನರ ಸುಟ್ಟ ತಲೆ ಬುರುಡೆಗಳು ಪತ್ತೆಯಾಗಿದ್ದು ಇನ್ನೂ ಇಬ್ಬರ ಮೃತ ದೇಹಗಳ ಹುಡುಕಾಟ ಕೂಡ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು. ಸುರಪುರ ಠಾಣೆಯ ಪಿ.ಐ ಉಮೇಶ ಎಂ ಸೇರಿದಂತೆ ಸಿಬ್ಬಂದಿಗಳು ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read