ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮನೂರು ಸಮೀಪದ ಶೆಟ್ಟಿ ಕಾಡುನಲ್ಲಿ ತನ್ನ ಮೂರು ಮಕ್ಕಳು,ಪತ್ನಿಯನ್ನು ಪಕ್ಕದ ಮನೆಯ ಬಾವಿಗೆ ತಳ್ಳಿ ಮೂರು ಮಕ್ಕಳನ್ನು ಕೊಲೆಗೈದ ಆರೋಪಿ ಹಿತೇಶ್ ಶೆಟ್ಟಿಗಾರ್ ರಿಗೆ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ತಾಳಿಪಾಡಿ ಶೆಟ್ಟಿಕಾಡು ಎಂಬಲ್ಲಿ 2022ನೇ ಜೂ .23 ರಂದು ಆರೋಪಿ ಹಿತೇಶ್ ಶೆಟ್ಟಿಗಾರ್ ರವರ ಪತ್ನಿ ಲಕ್ಷ್ಮಿ (40)ಎಂಬುವವರು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಶಾಲೆಗೆ ಹೋಗಿರುವ ತನ್ನ ಮಕ್ಕಳು ಎಂದಿನಂತೆ ಸಂಜೆ ಬಾರದಿರುವ ಸಂದರ್ಭದಲ್ಲಿ ತನ್ನ ಮಕ್ಕಳು ಎಲ್ಲಿ? ಎಂದು ಪತಿ ಹಿತೇಶ್ ಶೆಟ್ಟಿಗಾರ್ ನಲ್ಲಿ ಕೇಳಿದಾಗ ಎಲ್ಲೋ ಅಡಗಿರಬಹುದೆಂದು ತಿಳಿಸಿದ್ದು ನಂತರ ಲಕ್ಷ್ಮೀಯವರು ಪಕ್ಕದ ಮನೆಯ ಬಾವಿಯ ಬಳಿ ಹೋಗಿ ಹುಡುಕಾಡಿದಾಗ ಬಾವಿಯೊಳಗಿಂದ ಮಕ್ಕಳ ಬೊಬ್ಬೆ ಹಾಗೂ ಚೀರಾಟ ಹೇಳಿ ಬಂದು ಕೂಡಲೇ ನೋಡಿದಾಗ ಆರೋಪಿ ಹಿತೇಶ್ ತನ್ನ ಮಕ್ಕಳಾದ ರಶ್ಮಿಕಾ(14) ಉದಯ್(11) ದಕ್ಷಿತ್ (04) ರವರನ್ನು ಬಾವಿಗೆ ಹಾಕಿ ಬಳಿಕ ತನ್ನ ಹೆಂಡತಿಯನ್ನು ಕೂಡ ಬಾವಿಗೆ ಹಾಕಿ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದನು.
ಬೊಬ್ಬೆ ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು ,ಬಳಿಕ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾವಿಯಿಂದ ನಾಲ್ಕು ಮಂದಿಯನ್ನು ಮೇಲಕ್ಕೆತ್ತಿದ್ದು ಮೂರು ಮಕ್ಕಳು ಮೃತ ಪಟ್ಟಿದ್ದು ಪತ್ನಿ ಲಕ್ಷ್ಮೀ ಬದುಕುಳಿದ್ದರು.
ಈ ಬಗ್ಗೆ ಲಕ್ಷ್ಮೀ ಪತಿ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದ್ದು, ಪೊಲೀಸರು ಹಿತೇಶ್ ಶೆಟ್ಟಿಗಾರ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ರವರು ಆರೋಪಿಗೆ ಕಲಂ 302 ಪ್ರಕರಣಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.