ತಡೆಗೋಡೆ ಕುಸಿಯುವ ಭೀತಿ: ಮಡಿಕೇರಿ-ಮಂಗಳೂರು ರಸ್ತೆ ಬಂದ್

ಹೊಸದಿಗಂತ ವರದಿ ಮಡಿಕೇರಿ: 

ನಗರದ ಜಿಲ್ಲಾಧಿಕಾರಿ ಕಚೇರಿ ಕೆಳಭಾಗದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿಯುವ ಆತಂಕ ಎದುರಾಗಿದ್ದು, ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕೆಳಭಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಸುರಿದ ಆರಂಭಿಕ ಮಳೆಗೇ ಈ ತಡೆಗೋಡೆಯ ತಳಭಾಗ ಉಬ್ಬಿ ಕುಸಿಯುವ ಆತಂಕ ಎದುರಾಗಿದೆ.

ಆದರೆ ಸಂಬಂಧಿಸಿದ ಇಲಾಖೆಯ ಇಂಜಿನಿಯರ್, ತಡೆಗೋಡೆ ಕುಸಿಯುವ ಸಂಭವವಿಲ್ಲ. ಆಧುನಿಕ ತಂತ್ರಜ್ಞಾನದಿಂದ ನಿರ್ಮಿಸಿರುವ ಈ ತಡೆಗೋಡೆ ಕೆಲವು ಇಂಚುಗಳಷ್ಟು ಉಬ್ಬುವುದು ಸಹಜ ಎಂದು ಸಮರ್ಥಿಸಿಕೊಂಡಿದ್ದಾರೆ. ಇದೀಗ ಈ ಉಬ್ಬುವಿಕೆ ಮತ್ತಷ್ಟು ಅಧಿಕವಾಗಿದ್ದು, ತಡೆಗೋಡೆ ಕುಸಿಯುವ ಆತಂಕ ಎದುರಾಗಿದೆ.

ವಾಹನ ಸಂಚಾರ ಬಂದ್:

ತಡೆಗೋಡೆ ಕುಸಿಯುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮಂಗಳೂರು ಕಡೆಗೆ ತೆರಳುವ ವಾಹನಗಳನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ವೀರಾಜಪೇಟೆಗೆ ತೆರಳುವ ರಸ್ತೆಯ ಮೇಕೇರಿಯಿಂದ ತಾಳತ್’ಮನೆ ಮಾರ್ಗವಾಗಿ ಹಾಗೂ ಮಂಗಳೂರು ರಸ್ತೆಯಿಂದ ಬರುವವರು ತಾಳತ್’ಮನೆ- ಮೇಕೇರಿ- ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಸಂಚಾರಿ‌ ಪೊಲೀಸರು ಮಂಗಳೂರು ರಸ್ತೆ ಬಂದ್ ಮಾಡಿ ಪಹರೆ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!