ಊಟ ಹೆಚ್ಚಾಯ್ತು ಎಂದೋ, ಅಂದುಕೊಂಡಷ್ಟು ಜನ ಫಂಕ್ಷನ್‌ಗೆ ಬರಲಿಲ್ಲ ಎಂದೋ ಊಟ ವೇಸ್ಟ್ ಮಾಡಬಾರದು ಎಂದು ಸ್ಲಂಗಳಲ್ಲಿ ಇರುವ ಜನರಿಗೆ, ರಸ್ತೆ ಬದಿ ಟೆಂಟ್ ಹಾಕಿ ಜೀವನ ನಡೆಸುವವರಿಗೆ ಊಟ ನೀಡುವ ಎಷ್ಟೋ ಮಂದಿ ಇದ್ದಾರೆ. ಆದರೆ ಸ್ಲಂ ಜನರಿಗಾಗಿಯೇ ಅಡುಗೆ ಮಾಡೋರು ಇದ್ದಾರಾ? ಈ ರೀತಿ ಯಾರೂ ಇರೋದೇ ಇಲ್ಲ ಅನ್ನೋದಾದ್ರೆ ಈ ಆರ್ಟಿಕಲ್ ಓದಿ.. ಬಡವರಿಗಾಗಿ ಸ್ಲಂ ಜನರಿಗಾಗಿ ಪ್ರೀತಿಯಿಂದ ಅಡುಗೆ ತಯಾರಿಸುವ ಹೆಣ್ಣಿನ ಬಗ್ಗೆ ತಿಳಿದುಕೊಳ್ತೀರಿ..
ವಸಂತ ವಿಹಾರದ ಪ್ರಿಯಾಂಕ ಗಾಂಧಿ ಶಿಬಿರದಲ್ಲಿ ಊಟ ವಿತರಿಸಲು ಹೋದ ದಿನ ನಾನು ಎಂದಿಗೂ ಮರೆಯೋದಿಲ್ಲ…. ಆ ದಿನ ನನ್ನ ಜೀವನವನ್ನು ಬದಲಾಯಿಸಿತ್ತು. ಜೀವನಕ್ಕೆ ಹೊಸತೊಂದು ಆಯಾಮ ಸಿಕ್ಕಿತ್ತು ಎಂದು ಹೇಳುತ್ತಾರೆ ಪಾಯಲ್ ಕುಮಾರ್.
ಆ ದಿನ ಏನಾಯ್ತು? ಸ್ಲಂ ವಾಸಿಗಳ ಜೀವನ ಹೇಗಿದೆ?
ಅಲ್ಲಿನ ಜನ ಮೂಲಭೂತ ಸೌಕರ್ಯಕ್ಕಾಗಿ ಅದೆಷ್ಟು ಒದ್ದಾಡುತಿದ್ದರೋ. ಇದೆ ಕಾರಣಕ್ಕಾಗಿ ನಾನು ಮನೇಲಿ ಊಟ ತಯಾರು ಮಾಡಿ ಅಲ್ಲಿನ ಜನರಿಗೆ ಹಂಚುತ್ತಿದೆ. ತುಂಬಾ ಸಲ ಹೀಗೆ ಮಾಡ್ಬೇಕಾದ್ರೆ ನಂಗೆ ಒಂದು ವಿಷಯ ಅರ್ಥ ಆಗಿದ್ದು ಏನಂದ್ರೆ ಅಲ್ಲಿನ ಜನರಿಗೆ ಬರೀ ಊಟ ಮಾತ್ರ ಅಲ್ಲದೆ ಸಿಗ್ಬೇಕಾಗಿರೋದು ತುಂಬಾ ಇದೆ. ಅದರಲ್ಲಿ ನನ್ನ ಕೈಲಾಗಿದ್ದನ್ನು ನೀಡುತ್ತೇನೆ ಎಂದು ಅಂದೇ ನಿರ್ಧರಿಸಿದೆ ಅಂತಾರೆ ಪಾಯಲ್.
ಕೋವಿಡ್ ಕಲಿಸಿದ ಪಾಠ
ಪಾಯಲ್ ಕುಮಾರ್ ಕಾರ್ಪೊರೇಟ್ ಜಗತ್ತಿನಲ್ಲಿ ಸುಮಾರು ಮೂರು ವರ್ಷಗಳ ಕಾಲ ಇವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದು, ಮುಂದೆ ತನ್ನ ಪತಿ ಸೌಂಡ್ ಎಲೆಕ್ಟ್ರಾನಿಕ್ ಇಂಜಿನಿಯರ್ ಆಗಿರೋ ಪಂಕಜ್ ಕುಮಾರ್ ಅವ್ರ ಜೊತೆ ಸೇರಿ ಅವ್ರದ್ದೇ ಬಿಸಿನೆಸ್ ನೋಡಿಕೊಳ್ಳೋದಕ್ಕೆ ಶುರು ಮಾಡಿದ್ದರು. ಎಲ್ಲಾ ಸರಿ ಇದೆ ಎನ್ನುವಾಗ ಕೋವಿಡ್ ಬಂದು ವಕ್ಕರಿಸಿತು! ಇದು ಯಾರ ಜೀವನದ ಜೊತೆ ಆಟ ಆಡಿಲ್ಲ ಹೇಳಿ? ನನ್ನ ಲೈಫ್ ಕೂಡ ಬದಲಾಯ್ತು. ಕೋವಿಡ್ ಟೈಮ್ ನಲ್ಲಿ ಮೊದಲ ಬಾರಿಗೆ ಈ ಸ್ಲಂ ಗೆ ಕಾಲಿಟ್ಟಾಗ ಇಲ್ಲಿನ ವಾಸ್ತವ ನಾನು ಊಹಿಸಿದ್ದಕ್ಕಿಂತಲೂ ಘೋರವಾಗಿತ್ತು. ಇಷ್ಟು ನೋಡಿದ್ದು ನಾನು ಅವರಿಗೆ ಏನನ್ನಾದರೂ ಕೊಡಬೇಕು ಅಂದುಕೊಂಡೆ ಎಂದು ವಿವರಿಸ್ತಾರೆ ಪಾಯಲ್.
ಕೇಕ್‌ನ್ನು ಏನು ಮಾಡ್ಬೇಕು ಅಂತ ಮಗುಗೆ ಗೊತ್ತಾಗ್ಲೇ ಇಲ್ಲ!
ಆಮೇಲೆ ಪಾಯಲ್ ಆಹಾರವನ್ನು ಮನೆಯಲ್ಲಿ ತಯಾರಿಸಿ ಎಲ್ಲರಿಗೂ ಹಂಚುತ್ತಿದ್ದರು ಇದು ಅವರಿಗೆ ಪ್ರತಿದಿನ ಹೊಸ ಅನುಭವವನ್ನು ಕಲಿಸಿತ್ತು. ಪಾಯಲ್ ಅಲ್ಲಿನ ಜನರಿಗೆ ಕೇವಲ ಊಟ ಮಾತ್ರ ಅಲ್ಲದೆ ಅಲ್ಲಿನ ಮಕ್ಕಳಿಗೆ ಶಿಕ್ಷಣವನ್ನು ಕೂಡ ನೀಡಲು ಪ್ರಾರಂಭಿಸಿದ್ದರು. ಒಮ್ಮೆ ಆ ಸ್ಲಂಗೆ ನಾನು ಕೇಕ್ ತೆಗೆದುಕೊಂಡು ಹೋಗಿದ್ದೆ.. ಮಗುವಿನ ಬರ್ತ್ ಡೇ ಆಚರಿಸಲು. ನಾನು ಆ ಮಗುವಿಗೆ ಬರ್ತಡೇ ಕೇಕ್ ಕತ್ತರಿಸಲು ಚಾಕು ಕೊಟ್ಟೆ ಆದರೆ ಆ ಮಗುವಿಗೆ ಏನು ಮಾಡಬೇಕು ಅಂತ ಗೊತ್ತೇ ಆಗಲಿಲ್ಲ. ಯಾಕಂದ್ರೆ ಆ ಮಗುವಿಗೆ ಬರ್ಥ್‌ಡೇ ಆಚರಣೆಫಸ್ಟ್ ಟೈಮ್ ಆಗಿತ್ತು. ಇದು ನನ್ನ ಮನಸ್ಸನ್ನು ಚೂರು ಮಾಡಿತ್ತು ಎನ್ನುತ್ತಾರೆ ಪಾಯಲ್.
ಆಗ ಹುಟ್ಟಿದ್ದು ಫೀಡ್ ದ ಸೋಲ್ಸ್
ಈ ಅನುಭವಗಳೆಲ್ಲ ಪಾಯಲ್ ಅವರಿಗೆ “ಫೀಡ್ ದ ಸೋಲ್ಸ್” ಎಂಬ ಸರ್ಕಾರೆತ್ತರ ಸಂಸ್ಥೆಯನ್ನ ಪ್ರಾರಂಭ ಮಾಡಲು ಪ್ರೇರಣೆ ನೀಡಿತು. “ಫೀಡ್ ದ ಸೋಲ್ಸ್” ಮೂಲಕ ಪಾಯಲ್ ಅವರು ಬಡ ಸಮುದಾಯದ ಮಕ್ಕಳಿಗೆ ಆಹಾರ ಒದಗಿಸುವುದು, ಶಿಕ್ಷಣ ನೀಡುವುದು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಹಾಯ ಮಾಡುವ ಕೌಶಲ್ಯ ತರಬೇತಿಗಳನ್ನು ಮಹಿಳೆಯರಿಗೆ ನೀಡುವುದನ್ನು ಗುರಿಯಾಗಿಸಿಕೊಂಡರು.
ಮಕ್ಕಳಿಗೆ ಶಿಕ್ಷಣ, ಮಹಿಳೆಯರಿಗೆ ಉದ್ಯಮ
“ಶಿಕ್ಷಣವು ಉತ್ತಮ ಜೀವನಕ್ಕೆ ಪಾಸ್ ಪೋರ್ಟ್ ಎಂದು ನಾನು ಅವರಿಗೆ ಅರ್ಥ ಮಾಡಿಸಬೇಕಿತ್ತು. “ಫೀಡ್ ದ ಸೋಲ್ಸ್” ಮೂಲಕ ಸವಲತ್ತು ರಹಿತ ಮಕ್ಕಳಿಗೆ ಸಂಜೆ ತರಗತಿಗಳನ್ನ ನಡೆಸುವುದು ಮುಖ್ಯವಾಗಿತ್ತು.” ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಹಿಳೆಯರ ಸಬಲೀಕರಣಕ್ಕಾಗಿ ತಮ್ಮ ಸಮಯವನ್ನು ಮೀಸಲಿಡುತ್ತಿರುವ “ಫೀಡ್ ದ ಸೋಲ್ಸ್” ಸಂಸ್ಥೆ “ಪ್ರಾಜೆಕ್ಟ್ ಹುನರ್” ಮೂಲಕ ಮಹಿಳೆಯರಿಗೆ ಗೃಹಲಂಕಾರಿಕ ವಸ್ತುಗಳು ಜವಳಿ ವಸ್ತುಗಳು ಹಾಗೂ ತ್ಯಾಜ್ಯದಿಂದ ಹೊಸ ಹೊಸ ಉತ್ಪನ್ನಗಳನ್ನು ರಚಿಸುವ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಮಹಿಳೆಯರಿಗೆ ನಾವು ಶಿಕ್ಷಣದ ಜೊತೆಗೆ ಅಡುಗೆ ಹಾಗೂ ಸ್ವಉದ್ಯೋಗ ಕೌಶಲ್ಯಗಳನ್ನು ಕಲಿಸುವುದರಿಂದ ಅವರು ಸ್ವಾವಲಂಬಿಯಾಗಿ ಬದುಕಬಹುದು ಎನ್ನುತ್ತಾರೆ ಪಾಯಲ್ ಕುಮಾರ್.
ಸಹಾಯ ಮಾಡೋದಕ್ಕೆ ಕೋಟಿ ಕೋಟಿ ಹಣ ಬೇಕೇ ಬೇಕು ಎಂದೇನಿಲ್ಲ. ಸಹಾಯ ಮಾಡುವ ಮನಸ್ಸಿದ್ದು, ಅಕ್ಕಪಕ್ಕ ಕಣ್ಣಾಡಿಸಿದರೆ ಸಾಕು. ನಮ್ಮ ಸಹಾಯ ಅರಸುವ ಸಾವಿರ ಮಂದಿ ಇರುತ್ತಾರೆ. ನಮ್ಮ ಒಂದು ಕೈ ಅವರ ಜೀವನವನ್ನು ಬದಲಾಯಿಸಬಹುದು ಅಲ್ವಾ?