ಸಾವಿನಲ್ಲೂ ಸಾರ್ಥಕ ಮೆರೆದ ಮಹಿಳಾ ಪೈಲೆಟ್: ಏಳು ಮಂದಿಗೆ ಅಂಗಾಂಗಗಳ ದಾನ ಮಾಡಿದ ಚೇಶ್ತಾ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪುಣೆಯ ಬಾರಮತಿ-ಬಿಗ್ವಾನ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಪೈಲೆಟ್‌ಗಳು ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಭೀಕರ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ ಮೂರಕ್ಕೆ ಏರಿಕೆಯಾಗಿದೆ.

ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಟ್ರೈನಿ ಪೈಲೆಟ್ ಚೇಸ್ತಾ ಬಿಷ್ಣೋಯ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆದರೆ ಈಕೆ ಸಾವಿನ ನಡೆವೆಯೂ 7 ರೋಗಿಗಳಿಗೆ ಬೆಳಕಾಗಿದ್ದಾರೆ.

21 ವರ್ಷದ ಮಹಿಳಾ ಟ್ರೈನಿ ಪೈಲೆಟ್ ಚೇಸ್ತಾ ಬಿಷ್ಣೋಯ್ ತನ್ನ 7 ಅಂಗಾಂಗಗಳನ್ನು 7 ರೋಗಿಗಳಿಗೆ ದಾನ ಮಾಡಿದ್ದಾಳೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹೃದಯವಿದ್ರಾವಕ ಘಟನೆ ಪುಣೆಯಲ್ಲಿ ನಡೆದಿದೆ.

ಸೋಮವಾರ(ಡಿ.16) ಪುಣೆಯ ಬಾರಮತಿ-ಬಿಗ್ವಾನ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಪಾರ್ಟಿ ಮುಗಿಸಿಕೊಂಡು ತಡ ರಾತ್ರಿ ಕಾರಿನ ಮೂಲಕ ಆಗಮಿಸುತ್ತಿದ್ದ ನಾಲ್ವರು ಪೈಲೆಟ್‌ಗಳಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿತ್ತು. ಈ ಭೀಕರ ಅಪಘಾತದಲ್ಲಿ ಪೈಲೆಟ್‌ಗಳಾದ ಆದಿತ್ಯ ತಾನ್ಸೆ ಹಾಗೂ ತಕ್ಶು ಶರ್ಮಾ ಸ್ಥಳದಲ್ಲೇ ಮೃತಪಟ್ಟಿದ್ದರು. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ತರಬೇತಿ ಮಹಿಳಾ ಪೈಲೆಟ್ ಚೇಸ್ತಾ ಬಿಷ್ಣೋಯ್ ಹಾಗೂ ಕಾರು ಚಲಾಯಿಸುತ್ತಿದ್ದ ಪೈಲೆಟ್ ಕೃಣ್ಣ ಇಶು ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು.

ಬಿಗ್ವಾನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೇಸ್ತಾ ಬಿಷ್ಣೋಯ್ ಇದೀಗ ಮೃತಪಟ್ಟಿದ್ದಾಳೆ. ಗಂಭೀರ ಗಾಯದಿಂದ ಚೇಸ್ತಾ ಮೃತಪಟ್ಟಿದ್ದಾಳೆ. ಚೇಸ್ತಾ ಪೋಷಕರು 21 ವರ್ಷದ ಮಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಈ ನೋವಿನ ನಡುವೆಯೂ ಚೇಸ್ತಾಳ 7 ಅಂಗಾಂಗವನ್ನು 7 ರೋಗಿಗಳಿಗೆ ದಾನ ಮಾಡಿದ್ದಾರೆ.

ಈ ಕುರಿತು ಬಿಗ್ವಾನ್ ಪೊಲೀಸರು ಮಾಹಿತಿ ನೀಡಿದ್ದಾರೆ. ಚೇಸ್ತಾ ಬಿಷ್ಣೋಯ್ ಪೋಷಕರು ಆಕೆಯ 7 ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಕಣ್ಣು, ಲಿವರ್, ಹೃದಯ, ಕಿಡ್ನಿ ಸೇರಿದಂತೆ 7 ಅಂಗಾಂಗಳು 7 ರೋಗಿಗಳ ಬಾಳಿಗೆ ಬೆಳಕಾಗಿದೆ ಎಂದಿದ್ದಾರೆ.

ಇದೇ ವೇಳೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದ ನಾಲ್ವರು ತರಬೇತಿ ಪೈಲೆಟ್ ಆಗಿದ್ದರು. ತಡ ರಾತ್ರಿ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ಮದ್ಯ ಸೇವಿಸಿದ್ದರು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆ ವಿಭಜಗಕ್ಕೆ ಡಿಕ್ಕಿ ಹೊಡೆದು ರೋಲ್ ಆದ ಕಾರು ನೇರವಾಗಿ ಮರಕ್ಕೆ ಡಿಕ್ಕಿಯಾಗಿದೆ. ಬಳಿಕ ಪೈಪ್ ಲೈನ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜು ಗುಜ್ಜಾಗಿದೆ. ರೆಡ್ ಬರ್ಡ್ ಎವಿಯೇಶನ್ ಅಕಾಡೆಮಿಯಲ್ಲಿ ಪೈಲೆಟ್ ತರಬೇತಿ ನಡೆಸುತ್ತಿದ್ದ ನಾಲ್ವರ ಪೈಕಿ ಇದೀಗ ಮೂವರು ಮೃತಪಟ್ಟಿದ್ದಾರೆ. ಮತ್ತೊರ್ವನ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಆದರೆ ದೇಹದಲ್ಲಿ ಗಾಯದ ಪ್ರಮಾಣ ಹೆಚ್ಚಾಗಿರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳಾಂತರ ಸಾಧ್ಯವಿಲ್ಲ ಎಂದು ವೈದ್ಯರ ತಂಡ ಪೋಷಕರಿಗೆ ಸೂಚಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!