ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಬೇಡ್ಕರ್ ಕುರಿತ ಅಮಿತ್ ಶಾ ಮಾತಿನ ವಿರುದ್ಧ I.N.D.I.A ಬಣದ ಪಕ್ಷಗಳು ರಾಷ್ಟ್ರ ರಾಜಧಾನಿ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ I.N.D.I.A ವಿರೋಧ ಪಕ್ಷಗಳ ಕೂಟದಲ್ಲಿರುವ ನ್ಯಾಶನಲ್ ಕಾಂಗ್ರೆಸ್ ನ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇತ್ತೀಚಿಗೆ ಇವಿಎಂಗಳ ಲೋಪ ಕುರಿತ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದ ಒಮರ್ ಅಬ್ದುಲ್ಲಾ, ಇದೀಗ ಅಂಬೇಡ್ಕರ್ ಕುರಿತ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಮಿತ್ ಶಾ ಅವರೊಂದಿಗೆ ಜಮ್ಮು-ಕಾಶ್ಮೀರಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ಮರು ಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಕುರಿತು ಒಮರ್ ಅಬ್ದುಲ್ಲಾ ಚರ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
370ನೇ ವಿಧಿ ರದ್ದುಗೊಂಡ ನಂತರ ಕೇಂದ್ರಾಡಳಿತ ಪ್ರದೇಶದ ಮೊದಲ ಸಿಎಂ ಆಗಿ ಅಬ್ದುಲ್ಲಾ ಅಧಿಕಾರ ವಹಿಸಿಕೊಂಡ ನಂತರ ಅಮಿತ್ ಶಾ ಅವರನ್ನು ಎರಡನೇ ಬಾರಿಗೆ ಭೇಟಿಯಾಗಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಶೀಘ್ರದಲ್ಲಿ ರಾಜ್ಯ ಸ್ಥಾನಮಾನ ಸಿಗಲಿದೆ ಎಂಬ ವಿಶ್ವಾಸದಲ್ಲಿರುವ ಮುಖ್ಯಮಂತ್ರಿ, ವಿವಿಧ ಇಲಾಖೆಗಳ ಮೇಲೆ ಚುನಾಯಿತ ಸರ್ಕಾರದ ಅಧಿಕಾರಗಳ ಕುರಿತಾಗಿಯೂ ಸ್ಪಷ್ಟನೆ ಪಡೆದಿದ್ದಾರೆ ಎನ್ನಲಾಗಿದೆ.