ಹೊಸದಿಗಂತ ವರದಿ, ಕಲಬುರಗಿ:
೭ನೇ ಭಾರತೀಯ ಸಂಸ್ಕೃತಿ ಉತ್ಸವ ೩ನೇ ದಿನದಂದು ನಡೆಯಲಿರುವ ಯುವ ಸಮಾವೇಶದಲ್ಲಿ ಭಾಗಿಯಾಗಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹರಾದ ಮಾನನೀಯ ದತ್ತಾತ್ರೇಯ ಹೊಸಬಾಳೆ ಅವರು ಶುಕ್ರವಾರ (ಜ.೩೧) ಕಲಬುರಗಿ ನಗರಕ್ಕೆ ಆಗಮಿಸಲಿದ್ದಾರೆ.
ಜಿಲ್ಲೆಯ ಸೇಡಮ್ ರಸ್ತೆಯ ಬೀರನಳ್ಳಿಯ ಪ್ರಕೃತಿ ನಗರದಲ್ಲಿ ನಡೆಯುತ್ತಿರುವ ಕೊತ್ತಲ ಸ್ವರ್ಣ ಜಯಂತಿ ಹಾಗೂ ೭ನೇ ಭಾರತೀಯ ಸಂಸ್ಕೃತಿ ಉತ್ಸವದ ೩ನೇ ದಿನದಂದು ಬೆಳಿಗ್ಗೆ ೧೦-೩೦ಕ್ಕೆ ನಡೆಯಲಿರುವ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ.
ಯುವ ಸಮಾವೇಶದಲ್ಲಿ ಇವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದು, ಮಧ್ಯಾಹ್ನ ೩ ಗಂಟೆಗೆ ನಡೆಯಲಿರುವ ದಿಶಾ ನಿರ್ದೇಶನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಭಾರತೀಯ ಸಂಸ್ಕೃತಿ ಉತ್ಸವದ ಮಾಧ್ಯಮ ಸಂಚಾಲಕ ಪ್ರಭಾಕರ ಜೋಶಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.