September 7, 2026
Monday, September 7, 2026
spot_img

ಮದಗಜಗಳ ಭೀಕರ ಕಾಳಗ: ಮನೆ ಮೇಲೆ ಬಿದ್ದ ಮರಗಳು, ಕುಟುಂಬ ಸೇಫ್‌

ಹೊಸದಿಗಂತ ವರದಿ ಹಾಸನ :

ಮದದಲ್ಲಿರುವ ಎರಡು ಸಲಗಗಳು ಪರಸ್ಪರ ಕಾದಾಡಿಕೊಂಡ ಪರಿಣಾಮ ಮರಗಳು ಮುರಿದು ವಾಸದ ಮನೆಯ ಮೇಲೆ ಬಿದ್ದು ಮನೆ ಜಖಂಗೊಂಡಿರುವ ಘಟನೆ ಬೇಲೂರು ತಾಲೂಕಿನ ಕೌರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪುಟ್ಟಮ್ಮ ಎಂಬುವವರ ಮನೆಯ ಸಮೀಪ ಸುಮಾರು 13 ಕಾಡಾನೆಗಳು ಬೀಡುಬಿಟ್ಟಿದ್ದು, ಅವುಗಳ ಪೈಕಿ ಎರಡು ಸಲಗಗಳು ಬೆಳಗ್ಗಿನಿಂದಲೇ ಪರಸ್ಪರ ಕಾಳಗ ನಡೆಸುತ್ತಿವೆ. ಕಾದಾಟದ ವೇಳೆ ಮರಗಳು ಮುರಿದು ಪುಟ್ಟಮ್ಮ ಅವರ ವಾಸದ ಮನೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಟಿಎಫ್‌ (ETF) ಸಿಬ್ಬಂದಿ ಭೇಟಿ ನೀಡಿ, ಮುನ್ನೆಚ್ಚರಿಕಾ ಕ್ರಮವಾಗಿ ಪುಟ್ಟಮ್ಮ ಹಾಗೂ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಮದಗಜಗಳು ಬಿಟ್ಟುಬಿಟ್ಟು ಕಾಳಗಕ್ಕೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಕೌರಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೈಕ್ ಮೂಲಕ ಎಚ್ಚರಿಕೆ ನೀಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಅನಗತ್ಯವಾಗಿ ಕಾಡಾನೆಗಳ ಸಮೀಪ ತೆರಳದಂತೆ ಸೂಚಿಸಿದ್ದಾರೆ.

ಎರಡು ಆನೆಗಳು ಮದದಲ್ಲಿರುವ ಹಿನ್ನೆಲೆಯಲ್ಲಿ ಕಾಫಿ ತೋಟಗಳಿಗೆ ತೆರಳುವ ಕಾರ್ಮಿಕರು ಅರಣ್ಯ ಇಲಾಖೆಯಿಂದ ಆನೆಗಳ ಚಲನವಲನದ ಬಗ್ಗೆ ಮಾಹಿತಿ ಪಡೆದುಕೊಂಡು ತೆರಳುವಂತೆ ಸೂಚಿಸಲಾಗಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !