ಹೊಸದಿಗಂತ ವರದಿ,ಮಂಡ್ಯ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಲಘುವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಎಚ್ಚರಿಕೆ ನೀಡಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವತಿಯಿಂದ ನಿನ್ನೆ ಪ್ರತಿಭಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲೂ ಸಹ ಚಳವಳಿ ನಡೆಸಲಾಗುವುದು ಎಂದು ಹೇಳಿದರು.
ಸಾಂವಿಧಾನಿಕ ಹುದ್ದೆಯಾಗಿರುವ ಮುಖ್ಯಮಂತ್ರಿ ಹುದ್ದೆಗೆ ಅಪಮಾನ ಮಾಡಿದ್ದಾರೆ. ಸ್ವತಃ ಮುಖ್ಯಮಂತ್ರಿಘಿ, ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಅಸಂವಿಧಾನಿಕ ಪದ ಬಳಕೆ ಮಾಡುವ ಮೂಲಕ ತಮ್ಮ ವ್ಯಕ್ತಿತ್ವವನ್ನು ತೋರಿಸಿಕೊಟ್ಟಿದ್ದಾರೆ ಎಂದು ಛೇಡಿಸಿದರು.
ಆದಿಚುಂಚನಗಿರಿ ಮಠದ ಅಧಿದೈವ ಶ್ರೀ ಕಾಲಭೈರವನ ವಾಹನವನ್ನು ಅತ್ಯಂತ ನಿಕೃಷ್ಟವಾಗಿ ಬಣ್ಣಿಸುವ ಮೂಲಕ ನಾಥ ಪರಂಪರೆಗೂ ಸಿದ್ದರಾಮಯ್ಯ ಅವರು ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದನಾಥ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿದ ಅವರು, ಇಸ್ಲಾಂ ಧರ್ಮದಲ್ಲಿರುವಂತೆ 10 ಜನರನ್ನು ಮದುವೆ ಮಾಡಿಕೊಳ್ಳುವಂತಹ ಸಂಸ್ಕೃತಿ ನಮ್ಮದಲ್ಲಘಿ. ವೈಯಕ್ತಿಕ ತೇಜೋವಧೆ, ಟೀಕೆ-ಟಿಪ್ಪಣಿಗಳನ್ನು ಮಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಈಗಾಗಲೇ ಅಧಿಕಾರ ಕಳೆದುಕೊಂಡಿದ್ದಾರೆ. ಮುಂದೆಯೂ ಇಂತಹುದ್ದೇ ಧೋರಣೆ ಅನುಸರಿಸಿದಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಅಶೋಕ್ ಜಯರಾಂ ಮಾತನಾಡಿ, ಯೋಗಿಆದಿತ್ಯಾನಾಥ್ ಅವರು ವಿಶ್ವ ಮೆಚ್ಚಿಕೊಂಡಿರುವ ಶ್ರೇಷ್ಠ ಸಾಧಕರು. ಅವರು ಖಾಸಗಿ ಬದುಕನ್ನು ಬಿಟ್ಟು ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ದಾರ್ಶನಿಕರು. ಅಂತಹ ವ್ಯಕ್ತಿಯ ಬಗ್ಗೆ ತೀರಾ ವೈಯಕ್ತಿಕವಾಗಿ ಮಾತನಾಡುವಂತಹುದ್ದು ಸಿ.ಎಂ. ಇಬ್ರಾಹಿಂ ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ಸಾಧಕರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವುದನ್ನು ಬಿಟ್ಟು ಜನಹಿತ ಕಾರ‌್ಯಕ್ರಮಗಳ ಬಗ್ಗೆ ಮಾತನಾಡಲಿ, ಮತ್ತೆ ಮತ್ತೆ ಇಂತಹುದ್ದೇ ಹೇಳಿಕೆಗಳನ್ನು ನೀಡಿದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಪಕ್ಷ ಸದಾ ರೈತರ ಹಿತ ಬಯಸುತ್ತದೆ. ಅವರ ಹೋರಾಟದಲ್ಲೂ ನಾವೂ ಇದ್ದೇವೆ. ಅವರ ನ್ಯಾಯಯುತ ಬೇಡಿಕೆಗಳ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಶೀಘ್ರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜು, ಮಾಧ್ಯಮ ಸಂಚಾಲಕ ನಾಗಾನಂದ, ನಗರಾಧ್ಯಕ್ಷ ವಿವೇಕ್, ಮುಖಂಡ ವಸಂತ್‌ಕುಮಾರ್ ಅವರು ಗೋಷ್ಠಿಯಲ್ಲಿದ್ದರು.