ಸನ್ ರೈಸ್ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಹೊಸದಿಗಂತ ವರದಿ,ಕಲಬುರಗಿ:

60 ವರ್ಷದ ಮಹಿಳೆಯೊಬ್ಬರ ಯಕೃತ್ತಿನಲ್ಲಿ (ಲಿವರ್) ಬೆಳೆದಿದ್ದ ಸುಮಾರು ನಾಲ್ಕುವರೆ ಕಿಲೋಗ್ರಾಂ ತೂಕದ ಗಡ್ಡೆಯೊಂದನ್ನು ಇಲ್ಲಿನ ಸನ್ ರೈಸ್ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವೀ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ಸನ್ ರೈಸ್ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ.ಸಲ್ಮಾನ್ ಪಟೇಲ್ ಹಾಗೂ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಅರುಣ್ ಬಾರಾಡ್ ಈ ಕುರಿತು ಮಾಹಿತಿ ಹಂಚಿಕೊಂಡರು.

ಕಳೆದ 15 ದಿನಗಳ ಹಿಂದೆ ಕಿಬ್ಬೊಟ್ಟೆಯಲ್ಲಿ (ಕೆಳಭಾಗದ ಹೊಟ್ಟೆ) ತೀವ್ರ ಸ್ವರೂಪದ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆ ಸಮಸ್ಯೆಯೊಂದಿಗೆ ಬಂದಿದ್ದ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮಹಿಳೆಯನ್ನು ದಾಖಲಿಸಿಕೊಂಡು ತಪಾಸಣೆಗೆ ಒಳಪಡಿಸಲಾಗಿತ್ತು. ಆಕೆಯ ಯಕೃತ್ತಿನಲ್ಲಿ ರಕ್ತನಾಳಗಳ ಜೀವಕೋಶಗಳಿಂದ ಉದ್ಭವಿಸಿದ್ದ ಬೃಹತ್ ಗಡ್ಡೆಯೊಂದು ಪತ್ತೆಯಾಗಿತ್ತು. ವೈದ್ಯಕೀಯ ಪರಿಭಾಷೆಯಲ್ಲಿ ಲಿವರ್ ಹಿಮೊಜಿಮಾ ಎಂದು ಕರೆಯಲಾಗುವ ಈ ಗಡ್ಡೆ ಸುಮಾರು ನಾಲ್ಕುವರೆ ಕೆ.ಜಿ.ಯಷ್ಟಿತ್ತು. ಆಸ್ಪತ್ರೆಯ ಎಲ್ಲ ತಜ್ಞ ವೈದ್ಯರ ಆಳವಾದ ಸಮಾಲೋಚನೆಯ ಬಳಿಕ ಡಿಸೆಂಬರ್ 30ರಂದು ಮಹಿಳೆಯ ಹೊಟ್ಟೆಯಲ್ಲಿದ್ದ ಬೃಹತ್ ಗಡ್ಡೆ ಹೊರತೆಗೆಯಲಾಗಿದೆ ಎಂದರು.

ಸನ್ ರೈಸ್ ಆಸ್ಪತ್ರೆಗೆ ರೋಗಿಯನ್ನು ಕರೆತರುವುದಕ್ಕಿಂತಲೂ ಮುಂಚೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಮ್ಮ ಆಸ್ಪತ್ರೆಗೆ ಬಂದ ಬಳಿಕ ಸುದೀರ್ಘ ತಪಾಸಣೆಯ ಬಳಿಕ ಇದೊಂದು ಲಿವರ್ ಹಿಮಾಜಿಮಾ ಪ್ರಕರಣ ಎಂಬುದು ಪತ್ತೆಯಾಯಿತು ಎಂದು ಡಾ.ಅರುಣ್ ಹೇಳಿದರು.

ಹೈದರಬಾದ್ ಮತ್ತು ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ಇಂತಹ ಅಪರೂಪದ ಆಪರೇಷನ್ ಮಾಡಲು ಸುಮಾರು 10 ಲಕ್ಷಕ್ಕಿಂತಲೂ ಹೆಚ್ಚು ಬಿಲ್ ಮಾಡಲಾಗುತ್ತದೆ. ಆದರೆ ನಮ್ಮಲ್ಲಿ ಅತ್ಯಂತ ಕಡಿಮೆ ದರದಲ್ಲಿ ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ ಎಂದರು.

ಅರಿವಳಿಕೆ ತಜ್ಞರಾದ ಡಾ.ಅಜೀಮುದ್ದೀನ್ ಮೈದರ್ಗಿ, ಡಾ.ಹಸೀಬ್ ಸೋಹೆರ್ ವಾರ್ದಿ ಹಾಗೂ ಡಾ.ಪ್ರೇಮಾ ಬನಗೊಂಡ ಸುದ್ದಿಗೋಷ್ಠಿಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!