ಹೊಸದಿಗಂತ ವರದಿ,ಗದಗ :
ನಗರದಲ್ಲಿ ನಡೆಯಬೇಕಾಗಿದ್ದ ಸಂಗೀತ ಪರೀಕ್ಷಾ ಕೇಂದ್ರ ಹುಬ್ಬಳ್ಳಿ ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯಕ್ಕೆ ಸ್ಥಳಾಂತರಗೊಂಡಿದ್ದರಿಂದ ಅಕ್ರೋಶ ವ್ಯಕ್ತ ಪಡೆಸಿದ ಅಂಧ, ಅನಾಥ, ವಿಕಲಚೇತನ ವಿದ್ಯಾರ್ಥಿಗಳು ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ನಗರದ ಪುಟ್ಟರಾಜ ಗವಾಯಿಗಳ ಸರ್ಕಲ್‌ನಿಂದ ಡಿಸಿ ಕಚೇರಿವರೆಗೂ ಕಾಲ್ನಡಿಗೆಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಂಗೀತ ಕಾಶಿಯಲ್ಲಿ ಮೈಸೂರಿನ ಕುಲಪತಿಗಳು ದುರದ್ದೇಶ ಹೊಂದಿ ಸಂಗೀತ ಕೇಂದ್ರವನ್ನು ಹುಬ್ಬಳ್ಳಿಗೆ ವರ್ಗಾಯಿಸಿದ್ದಾರೆ. ಇದು ಪೂಜ್ಯ ಗುರುಗಳಿಗೆ ಹಾಗೂ ಸಂಗೀತಕ್ಕೆ ಅವಮಾನ ಮಾಡಿದಂತಾಗಿದೆ. ಸುಮಾರು 145 ಕ್ಕೂ ಹೆಚ್ಚು ಅಂಧ- ಅನಾಥ, ವಿಕಲಚೇತನ ವಿಧ್ಯಾರ್ಥಿಗಳು ಹುಬ್ಬಳ್ಳಿಗೆ ವಿವಿಧ ವಾದ್ಯಗಳನ್ನು ತೆಗದುಕೊಂಡು ಹೋಗಿ ಪರೀಕ್ಷೆ ಬರೆಯುದು ಹೇಗೆ? ಈ ಬಗ್ಗೆ ಸರಕಾರ ಇದೇ ಜು. 27 ರ ಒಳಗಾಗಿ ತನ್ನ ಆದೇಶವನ್ನು ಹಿಂಪಡೆದು ಹಿಂದಿನಂತೆ ಸಂಗೀತ ಕೇಂದ್ರವನ್ನು ಗದುಗಿಗೆ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು ಪ್ರಮುಖರು ವಿದ್ಯಾರ್ಥಿಗಳು ಹೋರಾಟಗಾರು ಪುಣ್ಯಶ್ರಮದ ಭಕ್ತರು ಸೇರಿದಂತೆ ಅಪಾರ ಪ್ರಮಾಣದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.