ರಾಜ್ಯದಲ್ಲಿ ಡೆಂಗ್ಯೂ ಜೊತೆ ನಿಫಾ ಆತಂಕ: ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ಸೂಚನೆ ನೀಡಿದ ಆರೋಗ್ಯ ಇಲಾಖೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಡೆಂಗ್ಯೂ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಮಧ್ಯೆ ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸ್‌ ಆತಂಕ ರಾಜ್ಯಕ್ಕೂ ಶುರುವಾಗಿದೆ.

ಈ ಹಿನ್ನೆಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತೋಲೆ ಹೊರಡಿಸಿದ್ದು, ನಿಫಾ ಸುರಕ್ಷಿತ ಎಂದು ಘೋಷಿಸುವವರೆಗೂ ಕೇರಳದ ಮಲಪ್ಪುರಂ ಜಿಲ್ಲೆಗೆ ತೆರಳದಂತೆ ಸೂಚನೆ ನೀಡಿದೆ.

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಜುಲೈ 21ರಂದು ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಎಇಎಸ್​ (AES) ರೋಗಲಕ್ಷಣಗಳನ್ನು ಹೊಂದಿದ್ದ ಮಲಪ್ಪುರಂನ 14 ವರ್ಷದ ಬಾಲಕ ಪರಿಂತಲ್ಮನ್ನಾದಲ್ಲಿನ ಆರೋಗ್ಯ ಕೇಂದ್ರದಲ್ಲಿ ತೋರಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್ನ ಉನ್ನತ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸುವ ಮೊದಲು ಸಾವನ್ನಪ್ಪಿದ್ದಾನೆ. ರೋಗಿಯ ಮಾದರಿಗಳನ್ನು ಎನ್‌ಐವಿ ವುಣೆಗೆ ಕಳುಹಿಸಲಾಗಿ, ನಿಫಾ ವೈರಸ್ ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರವು ಮಲಪ್ಪುರಂನಲ್ಲಿ ರೋಗವನ್ನು ತಡೆಗಟ್ಟಲು ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸೂಚಿಸಿದೆ. ಪ್ರಕರಣದ ತನಿಖೆ, ಸಾಂಕ್ರಾಮಿಕ ರೋಗಗಳ ಸಂಬಂಧಗಳ ಗುರುತಿಸುವಿಕೆ ಮತ್ತು ತಾಂತ್ರಿಕ ಬೆಂಬಲದೊಂದಿಗೆ ಕೇರಳ ರಾಜ್ಯಕ್ಕೆ ಸಹಾಯ ಮಾಡಲು ಕೇಂದ್ರ ತಂಡದೊಂದಿಗೆ ರಾಷ್ಟ್ರೀಯ ‘ಒನ್ ಹೆಲ್ತ್ ಮಿಷನ್’ ಬಹು ಸದಸ್ಯರ ಜಂಟಿ ಏಕಾಏಕಿ ಪ್ರಕರಣ ಪ್ರತಿಕ್ರಿಯಾ ತಂಡವನ್ನು ನಿಯೋಜಿಸಲಾಗಿದೆ.

ಕೇರಳ ರಾಜ್ಯ ಸರ್ಕಾರವು ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಸಲಹೆ ನೀಡಿದೆ.

ಮಲಪ್ಪುರಂನ ವರದಿ ಪ್ರಕರಣವು ಅಕ್ಯೂಟ್ ಎನ್ನೆಫಾಲಿಟಿಸ್ ಸಿಂಡೋಮ್ (ಎಇಎಸ್) ಪ್ರಕರಣವಾಗಿದ್ದು ಹೆಚ್ಚಿನ ಅಪಾಯದ ಸಂಪರ್ಕಗಳನ್ನು ಪರೀಕ್ಷೆಗೊಳಪಡಿಸಲಾಗಿ ನಿಫಾ ಸೋಂಕು, ಪತ್ತೆಯಾಗಿಲ್ಲದಿರುವುದರಿಂದ ಮನುಷ್ಯರಿಂದ ಮನುಷ್ಯನಿಗೆ ಹರಡುವ ಸಾಧ್ಯತೆಯು ತುಂಬಾ ಕಡಿಮೆಯಾಗಿದೆ. ಹಾಗಾಗಿ ಭಯಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ, ಕೇರಳದ ರೋಗ ಪೀಡಿತ ಪ್ರದೇಶವನ್ನು ನಿಫಾ ವೈರಸ್ ಸೋಂಕಿನಿಂದ ಸುರಕ್ಷಿತ ಎಂದು ಘೋಷಿಸುವವರೆಗೆ ಕೇರಳದ ಪೀಡಿತ ಪ್ರದೇಶಗಳಿಗೆ (ಮಲ್ಲಪುರಂ ಜಿಲ್ಲೆ) ಪ್ರಯಾಣವು ಅತ್ಯಂತ ಅವಶ್ಯಕವಾಗಿದಿದ್ದಲ್ಲಿ ಪ್ರಯಾಣವನ್ನು ತಪ್ಪಿಸಬಹುದಾಗಿದೆ ಎಂದು ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!