ಹೊಸದಿಗಂತ ವರದಿ, ವಿಜಯಪುರ:
ವಕ್ಫ್ ವಿರುದ್ಧದ ಹೋರಾಟ ನಿರಂತರವಾಗಿದ್ದು, ಅಧಿವೇಶನ ಮುಗಿದ ಬಳಿಕ ಮತ್ತೆ ಹೋರಾಟಕ್ಕೆ ಹೋಗುತ್ತೇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ವಕ್ಫ್ ವಿರುದ್ಧ ಹೋರಾಟ ವಿಚಾರ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವಕ್ಫ್ ನ ಎರಡನೇ ಹಂತದ ಹೋರಾಟ ಬಳ್ಳಾರಿ, ಹೊಸಪೇಟೆ ಬಳಿಕ ವಿಜಯನಗರ ಹೋಗುತ್ತೇವೆ ಎಂದರು.
ದೇಶದಲ್ಲಿ ಮುರು ಕಾನೂನು ಅವಶ್ಯಕವಾಗಿವೆ. ಒಂದು ಸಂಪೂರ್ಣ ವಕ್ಫ್ ರದ್ದಾಗಬೇಕು, ಒಂದು ದೇಶ ಒಂದು ಚುನಾವಣೆ ಈಗಾಗಲೇ ಪ್ರಧಾನಿ ಅವರು ಪಾರ್ಲಿಮೆಂಟ್‌ಗೆ ತರುತ್ತಿದ್ದಾರೆ, ಇನ್ನೊಂದು ಸಮಾನ ನಾಗರಿಕರ ಸಂಹಿತೆ ಇವು ದೇಶದ ಭದ್ರತೆ ದೃಷ್ಟಿಯಿಂದ ಅವಶ್ಯಕ. ಯಾವಾಗ ಒಂದು ದೇಶ ಒಂದು ಚುನಾವಣೆ ಪಾರ್ಲಿಮೆಂಟ್ ತಗೊಂಡು ಬಂದರೋ, ಅಲ್ಲಿ ನಾವು ಬಹುಮತ ಪಡೆಯುತ್ತೇವೆ. ಮುಂದಿನ ಬಜೆಟ್ ಅಧಿವೇಶನದ ವೇಳೆ ವಕ್ಫ್ ಬಹಳಷ್ಟು ತಿದ್ದುಪಡಿಯಾಗುತ್ತೆ. ವಕ್ಫ್ ವಿಚಾರವಾಗಿ ನಾವು ಕೊಟ್ಟ ಮಾಹಿತಿ ನೋಡಿ ಐಐಎಸ್ ಅಧಿಕಾರಿಗಳು ಗಾಬರಿಯಾಗಿದ್ದಾರೆ. ವಕ್ಫ್ ತಿದ್ದುಪಡಿಗೆ ನರೇಂದ್ರ ಮೋದಿ ಅವರಿಗೆ ಇನ್ನುಳಿದವರು ಪಾರ್ಲಿಮೆಂಟ್‌ನಲ್ಲಿ ಬೆಂಬಲ ಕೊಡಬೇಕು. ಇರದಿದ್ದರೆ ನೀವು ಮುಸ್ಲಿಂ ಪರವಾಗಿ ಇದ್ದೀರಾ ? ಎಂಬುದು ದೇಶದ ಜನರಿಗೆ ಗೊತ್ತಾಗುತ್ತೆ ಎಂದರು.
ಪಂಚಮಸಾಲಿ ಸಮಾಜದ ಮೀಸಲಾತಿ ಕೇವಲ ಒಂದು ಸಮುದಾಯಕ್ಕೆ ಮಾಡುತ್ತಿಲ್ಲ. ಮರಾಠಾ, ಜೈನ್, ಕ್ರೀಶ್ಚಿಯನ್ ಎಲ್ಲ ಸಮಾಜದ ಜನ ಪ್ರತಿನಿಧಿಯಾಗಿ ಹೋರಾಟ ಮಾಡುತ್ತಿದ್ದೇವೆ. ಶೇ. 7 ರಲ್ಲಿ ನಮಗೆಷ್ಟು ಬರುತ್ತೆ, ಶೇ. 1.5 ರಿಂದ ಶೇ. 2 ಬರುತ್ತೆ. ಜೈನ್ ಸಮುದಾಯದವರು ದಿಗಂಬರ ಜೈನರಿದ್ದಾರೆ, ಮರಾಠಾ ಸಮಾಜದಲ್ಲಿ ಎಂಟತ್ತು ಸಬ್ ಕಾಸ್ಟ್ ಬರುತ್ತದೆ, ವೈಷ್ಣವ ಎಂಬ ಸಣ್ಣ ಸಮುದಾಯವಿದೆ, ಅಲ್ಲಿ ಕುರುಬ ಜನಾಂಗ ಕೂಡ ಇದೆ. ಅದರಲ್ಲಿ 40 ಜಾತಿ ಬರುತ್ತೆ. ನಮ್ಮದು 2 ಎ ನಲ್ಲಿ ಕ್ಲೇಮ್ ಇಲ್ಲ, ಯಾರೂ ಕೈ ಕಾಲು ಕಡಿಯುವುದು ಬೇಡ. ಈ 40 ಜಾತಿಯಲ್ಲಿ ಬಡತನ ಇದೆ, ಹೀಗಾಗಿ ಮೀಸಲಾತಿ ಅವಶ್ಯಕತೆ ಇದೆ ಎಂದು ನಮ್ಮ ಗುರುಗಳು ಹೋರಾಟ ಮಾಡುತ್ತಿದ್ದಾರೆ ಎಂದರು.
ಪಿಡಿಒ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ವಿಳಂಬ, ಪ್ರತಿಭಟನಾನಿರತ ಮೇಲೆ ಪ್ರಕರಣದ ವಿಚಾರಕ್ಕೆ, ಪ್ರಶ್ನೆ ಪತ್ರಿಕೆ ಎಷ್ಟೊತ್ತಿಗೆ ತೆಗೆದುಕೊಂಡು ಬರುತ್ತಾರೆ. ನಾನು ವಿಡಿಯೋ ಸಮೇತ ಟ್ವೀಟ್ ಮಾಡಿದ್ದೇನೆ. ಉದ್ದೇಶಪೂರ್ವಕವಾಗಿ ತಮಗೆ ಬೇಕಾದವರನ್ನ ನೇಮಕಾತಿ ಮಾಡಲು ಇಡೀ ವ್ಯವಸ್ಥೆ ಬುಡಮೇಲು ಮಾಡ್ತಿದ್ದಾರೆ ಎಂದು ದೂರಿದರು.
ಪಿಎಸ್‌ಐ ನೇಮಕಾತಿ ಹಗರಣ ಎಲ್ಲಿ ಹೋಯ್ತು ?, ಪ್ರಿಯಾಂಕ ಖರ್ಗೆ ಎಷ್ಟು ಜಿಗದಾಡ್ತಿದ್ದರು. ಈಗೇಕೆ ಪಿಎಸ್‌ಐ ಹಗರಣದ ಬಗ್ಗೆ ಪ್ರಿಯಾಂಕ ಖರ್ಗೆ ಮಾತನಾಡುತ್ತಿಲ್ಲ. ಇದರಲ್ಲಿ ಪ್ರಿಯಾಂಕ ಖರ್ಗೆ ಕೈವಾಡ ಇರಬೇಕು ಅಂತ ನನಗೆ ಅನ್ನಿಸುತ್ತಿದೆ. ಪ್ರಿಯಾಂಕ ಖರ್ಗೆ ಅವರಿಗೆ ಸೇರಿದವರು ನೇಮಕಾತಿ ಆಗಿದ್ದಾರೆ ಅಂತ ನಮಗೂ ಗೊತ್ತಿದೆ. ಅದಕ್ಕೆ ಈಗ ಪ್ರಿಯಾಂಕ ಖರ್ಗೆ ಸುಮ್ಮನಿದ್ದಾರೆ. 150 ಕೋಟಿದು ಈಗ ಎಬ್ಬಿಸಿಕೊಂಡಿದ್ದಾರೆ. ಇದನ್ನು ತನಿಖೆ ಮಾಡಲ್ಲ, ತನಿಖೆಗೆ ಕೊಡಲ್ಲ ಸುಮ್ಮನೆ, ಸಬ್ ಗೊಲ್ಮಾಲ್ ಹೈ ಎಂದು ದೂರಿದರು.