ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಮಗನಿಗೆ ಕಿರುಕುಳ ನೀಡಿದವರಿಗೆ ಕಠಿಣ ಶಿಕ್ಷೆಯಾಗಿ ನ್ಯಾಯ ಸಿಗುವವರೆಗೂ ಆತನ ಚಿತಾಭಸ್ಮವನ್ನು ನೀರಿನಲ್ಲಿ ವಿಸರ್ಜಿಸುವುದಿಲ್ಲ ಎಂದು ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಆತುಲ್ ಸುಭಾಷ್ ತಂದೆ ಭಾನುವಾರ ಹೇಳಿದ್ದಾರೆ.
34 ವರ್ಷದ ಸುಭಾಷ್ ಡಿಸೆಂಬರ್ 9 ರಂದು ಬೆಂಗಳೂರಿನ ಮುನ್ನೇಕೊಳಲು ಸಮೀಪದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚ್ಛೇದಿತ ಪತ್ನಿ ಮತ್ತು ಅತ್ತೆ ತನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ನಿರಂತರವಾಗಿ ಕಿರುಕುಳ ನೀಡಿದ ಪರಿಣಾಮ ಆತ್ಮಹತ್ಯೆಗೆ ಶರಣಾಗಿರುವುದಾಗಿ ಆತುಲ್ ಸುಭಾಷ್ ವಿಡಿಯೋ ಮತ್ತು ಡೆತ್ ನೋಟ್ ನಲ್ಲಿ ಹೇಳಿದ್ದಾರೆ.
ಸಮಸ್ತಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆತುಲ್ ಸುಭಾಷ್ ತಂದೆ ಪವನ್ ಕುಮಾರ್, ಆರೋಪಿಗಳನ್ನು ಬಂಧಿಸಿದ್ದಕ್ಕಾಗಿ ಕರ್ನಾಟಕದ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಮಗನಿಗೆ ಕಿರುಕುಳ ನೀಡಿದ ಎಲ್ಲರಿಗೂ ಶಿಕ್ಷೆಯಾಗಬೇಕು, ಅವನ ಸಾವಿಗೆ ನ್ಯಾಯ ಸಿಗಬೇಕು ಮತ್ತು ಆತ ಆತ್ಮಕ್ಕೆ ಶಾಂತಿ ಸಿಗಬೇಕು, ನಮಗೆ ನ್ಯಾಯ ಸಿಗುವವರೆಗೆ ಆತನ ಚಿತಾಭಸ್ಮವನ್ನು ವಿಸರ್ಜಿಸುವುದಿಲ್ಲ. ನನ್ನ ಮಗನಿಗೆ ಹಣಕ್ಕಾಗಿ ಆತನ ಹೆಂಡತಿಯಿಂದ ಕಿರುಕುಳ, ಚಿತ್ರಹಿಂಸೆ ಅವಮಾನ ಮಾಡಲಾಗಿದೆ. ದಯವಿಟ್ಟು ನಮಗೆ ನ್ಯಾಯ ಒದಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದರು.
ಆರೋಪಿಗಳು ನಮ್ಮ ಮೊಮ್ಮಗನನ್ನು ಎಲ್ಲಿ ಇರಿಸಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಆತ ಕೊಲ್ಲಲ್ಪಟ್ಟಿದ್ದಾನೆಯೇ ಅಥವಾ ಅವನು ಬದುಕಿದ್ದಾನೆಯೇ? ನಮಗೆ ಏನೂ ಗೊತ್ತಿಲ್ಲ, ಅವನ ಬಗ್ಗೆ ನನಗೆ ಏನೂ ತಿಳಿದಿಲ್ಲ. ದಯವಿಟ್ಟು ನನ್ನ ಮೊಮ್ಮಗನನ್ನು ನಮಗೆ ಕೊಡಿ, ನಾವು ಅವನನ್ನು ಸಾಕುತ್ತೇವೆ ಎಂದು ಭಾವುಕವಾಗಿ ಪವನ್ ಕುಮಾರ್ ಹೇಳಿದರು.